ಆಪ್ ನಾಯಕಿ ಅತಿಶಿಗೆ ಮಾನನಷ್ಟ ನೋಟಿಸ್ ರವಾನಿಸಿದ ದಿಲ್ಲಿ ಬಿಜೆಪಿ
ಹೊಸದಿಲ್ಲಿ : ಬಿಜೆಪಿಯ ದಿಲ್ಲಿ ಘಟಕ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕಿ ಅತಿಶಿ ಅವರಿಗೆ ಮಾನಷ್ಟ ನೋಟಿಸ್ ರವಾನಿಸಿದೆ. ಅಲ್ಲದೆ, ಪಕ್ಷ ಸೇರಲು ಅವರಿಗೆ ಅತ್ಯಂತ ಆಪ್ತರ ಮೂಲಕ ಬಿಜೆಪಿ ಸಂಪರ್ಕಿಸಿದೆ ಎಂಬ ಹೇಳಿಕೆಗೆ ಸಂಬಂಧಿಸಿ ಅತಿಶಿ ಅವರು ಸಾರ್ವಜನಿಕ ಕ್ಷಮೆ ಯಾಚಿಸುವಂತೆ ಆಗ್ರಹಿಸಿದೆ.
ತಾನು ಸೇರಿದಂತೆ ಆಪ್ನ ನಾಲ್ವರು ನಾಯಕರು ಶೀಘ್ರ ಬಂಧಿತರಾಗುವ ಸಾಧ್ಯತೆ ಇದೆ ಎಂದು ಅತಿಶಿ ಅವರು ನಿನ್ನೆ ಹೇಳಿದ್ದರು. ಬಿಜೆಪಿ ಸೇರುವಂತೆ ಅಥವಾ ಈ ತಿಂಗಳು ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಲು ಸಿದ್ಧರಾಗಿರುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಪ್ರತಿಪಾದಿಸಿದ್ದರು.
ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದಿಲ್ಲಿ ಬಿಜೆಪಿ ವರಿಷ್ಠ ವಿರೇಂದ್ರ ಸಚ್ದೇವ್, ಈ ಪ್ರತಿಪಾದನೆಗೆ ಸಾರ್ವಜನಿಕ ಕ್ಷಮೆ ಕೋರುವಂತೆ ಆಗ್ರಹಿಸಿ ಅತಿಶಿ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಲಾಗಿದೆ ಎಂದು ಹೇಳಿದರು.
ಅವರನ್ನು ಯಾರು, ಹೇಗೆ ಹಾಗೂ ಯಾವಾಗ ಸಂಪರ್ಕಿಸಿದರು ಎಂಬ ಕುರಿತು ಸಾಕ್ಷಿ ಒದಗಿಸಲು ಅತಿಶಿ ಅವರ ವಿಫಲರಾಗಿದ್ದಾರೆ. ಆಪ್ ದಿಲ್ಲಿಯಲ್ಲಿ ಬಿಕ್ಕಟ್ಟು ಎದುರಿಸುತ್ತಿದೆ. ಹತಾಶೆಯಿಂದ ಹೊರಬರಲು ಸಾಧ್ಯವಾಗದೆ, ಅವರು ಇಂತಹ ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ. ಆದರೆ, ನಾವು ಈ ಹೇಳಿಕೆಯಿಂದ ಅವರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ತನ್ನ ಹೇಳಿಕೆಯನ್ನು ಸಾಬೀತುಪಡಿಸಲು ತನಿಖಾ ಸಂಸ್ಥೆಗೆ ಫೋನ್ ಅನ್ನು ಸಲ್ಲಿಸುವಂತೆ ಸಚ್ದೇವ್ ಅವರು ಅತಿಶಿ ಅವರಲ್ಲಿ ಕೋರಿದ್ದಾರೆ. ‘‘ಸುಳ್ಳು, ಮಾನಹಾನಿಕರ ಹಾಗೂ ಕಪೋಲಕಲ್ಪಿತ’’ ಹೇಳಿಕೆ ನೀಡಿರುವುದಕ್ಕೆ ಪಕ್ಷ ಅತಿಶಿ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದೆ. ಅಲ್ಲದೆ, ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದೆ ಎಂದು ದಿಲ್ಲಿ ಬಿಜೆಪಿಯ ವಕೀಲ ಹೇಳಿದ್ದಾರೆ.
ಅತಿಶಿ ಅವರು ಈ ನೋಟಿಸ್ಗೆ ಪ್ರತಿಕ್ರಿಯೆ ನೀಡದೇ ಇದ್ದರೆ, ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.