ದಿಲ್ಲಿ ಕೋಮುಗಲಭೆ : 7 ಆರೋಪಿಗಳನ್ನು ಖುಲಾಸೆಗೊಳಿಸಿದ ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ನಡೆದ ಕೋಮು ಗಲಭೆಯ ಸಂದರ್ಭದಲ್ಲಿ ಅಂಗಡಿಯೊಂದನ್ನು ಧ್ವಂಸಗೈದ ಆರೋಪವನ್ನು ಎದುರಿಸುತ್ತಿದ್ದ ಏಳು ಮಂದಿಯನ್ನು ದಿಲ್ಲಿಯ ನ್ಯಾಯಾಲಯವೊಂದು ಸೋಮವಾರ ದೋಷಮುಕ್ತಗೊಳಿಸಿದೆ.
ದೋಷಮುಕ್ತಗೊಂಡವರನ್ನು ಬಾಬು, ದಿನೇಶ್ ಯಾದವ್, ಟಿಂಕು, ಸಂದೀಪ್, ಗೋಲು ಕಶ್ಯಪ್, ವಿಕಾಸ್ ಕಶ್ಯಪ್ ಮತ್ತು ಅಶೋಕ್ ಎಂದು ಗುರುತಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ಬೆಂಬಲಿಗರು ಮತ್ತು ಅದನ್ನು ವಿರೋಧಿಸುವವರ ನಡುವೆ 2020 ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಘರ್ಷಣೆ ನಡೆದಿತ್ತು. ಗಲಭೆಯಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದಾರೆ ಮತ್ತು ನೂರಾರು ಮಂದಿ ಗಾಯಗೊಂಡಿದ್ದಾರೆ.
2020 ಮಾರ್ಚಿನಲ್ಲಿ, ಗೋಕಲ್ಪುರಿ ಪೊಲೀಸ್ ಠಾಣೆಯಲ್ಲಿ ಸಲ್ಮಾನ್ ಮಲಿಕ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಮೊಕದ್ದಮೆಯೊಂದು ದಾಖಲಾಗಿತ್ತು. ಗಲಭೆಕೋರರ ಗುಂಪೊಂದು ತನ್ನ ಅಂಗಡಿಯಲ್ಲಿ ದಾಂಧಲೆ ನಡೆಸಿ ಸುಟ್ಟು ಹಾಕಿದ್ದಾರೆ ಎಂದು ಅವರು ತನ್ನ ದೂರಿನಲ್ಲಿ ಆರೋಪಿಸಿದ್ದರು. ಇದರಿಂದಾಗಿ ತನಗೆ 5 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಹೇಳಿದ್ದರು.
ದೂರುದಾರರ ಅಂಗಡಿಗೆ ಗಲಭೆಕೋರರು ಬೆಂಕಿ ಹಚ್ಚುವ ದೃಶ್ಯವನ್ನು ಏಕೈಕ ಸಾಕ್ಷಿ ತನ್ನ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿದ್ದಾರೆ ಎಂದು ಸೋಮವಾರ ನಡೆದ ವಿಚಾರಣೆಯ ವೇಳೆ ಕರ್ಕರ್ಡೂಮ ನ್ಯಾಯಾಲಯಗಳ ಹೆಚ್ಚುವರಿ ಸೆಷನ್ಸ್ ನ್ಯಾಯಧೀಶ ಪುಲಸ್ತ್ಯ ಪ್ರಮಚಲ ಹೇಳಿದರು.
ಆದರೆ, ಈ ವೀಡಿಯೊವನ್ನು ತಿರುಚಲಾಗಿದೆಯೇ ಎನ್ನುವುದನ್ನು ಪತ್ತೆಹಚ್ಚುವ ಪರೀಕ್ಷೆಯನ್ನು ಮಾಡಲಾಗಿದೆಯೇ ಎನ್ನುವುದನ್ನು ವಿಧಿವಿಜ್ಞಾನ ಪರೀಕ್ಷಾ ವರದಿಯಲ್ಲಿ ಹೇಳಲಾಗಿಲ್ಲ ಎಂದು ನ್ಯಾಯಾಲಯ ಹೇಳಿತು. ಹಾಗಾಗಿ, ಇದರ ಆಧಾರದಲ್ಲಿ ವೀಡಿಯೊವನ್ನು ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.
ಅದೂ ಅಲ್ಲದೆ, ಅಂಗಡಿ ಸುಟ್ಟ ದಿನಾಂಕದ ಬಗ್ಗೆ ಏಕೈಕ ಸಾಕ್ಷಿಯು ವಿರುದ್ಧಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನ್ಯಾಯಾಧೀಶ ಪ್ರಮಚಲ ಹೇಳಿದರು. ಅಂಗಡಿಯನ್ನು 2020 ಫೆಬ್ರವರಿ 24ರಂದು ಸುಡಲಾಗಿದೆ ಎಂದು ಅವರು ಮೊದಲು ತನಿಖಾಧಿಕಾರಿಗೆ ಹೇಳಿದ್ದರು. ಆದರೆ, ಘಟನೆಯು ಫೆಬ್ರವರಿ 25ರಂದು ನಡೆದಿದೆ ಎಂದು ನ್ಯಾಯಾಲಯದಲ್ಲಿ ಅವರು ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು.
‘‘ಘಟನೆ ನಡೆದ ಸಮಯಕ್ಕೆ ಸಂಬಂಧಿಸಿ, ಪ್ರಾಸಿಕ್ಯೂಶನ್ ಪ್ರಕರಣ ಮತ್ತು ಅದು ದಾಖಲಿಸಿದ ಪುರಾವೆಯ ನಡುವೆ ದೊಡ್ಡ ಅಂತರವಿದೆ. ಇದರ ಪ್ರಯೋಜನ ಆರೋಪಿಗಳಿಗೆ ಸಿಗುತ್ತದೆ’’ ಎಂದರು.