ಶಾರ್ಜೀಲ್ ಇಮಾಮ್ ಜಾಮೀನು ಅರ್ಜಿ ತ್ವರಿತ ವಿಚಾರಣೆಗೆ ದಿಲ್ಲಿ ಹೈಕೋರ್ಟ್ ಗೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: 2020ರ ಈಶಾನ್ಯ ದಿಲ್ಲಿ ಗಲಭೆಗೆ ಪಿತೂರಿ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿದ್ಯಾರ್ಥಿ ನಾಯಕ ಶಾರ್ಜೀಲ್ ಇಮಾಮ್ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ದಿಲ್ಲಿ ಹೈಕೋರ್ಟ್ ಗೆ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಸಾಧ್ಯವಾದಷ್ಟು ತ್ವರಿತವಾಗಿ ಜಾಮೀನು ಅರ್ಜಿಯನ್ನು ಆಲಿಸಲು ಹೈಕೋರ್ಟ್ ಗೆ ಮನವಿ ಮಾಡಲು ಇಮಾಮ್ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ ಮತ್ತು ಹೈಕೋರ್ಟ್ ಈ ಮನವಿಯನ್ನು ಪರಿಗಣಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಜಾಮೀನು ಕೋರಿ ಶಾರ್ಜೀಲ್ ಇಮಾಮ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಇಮಾಮ್ ಪರವಾಗಿ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ದವೆ, ನಾವು ಜಾಮೀನಿಗೆ ಒತ್ತಾಯಿಸುತ್ತಿಲ್ಲ ಆದರೆ ಹೆಚ್ಚಿನ ವಿಳಂಬವಿಲ್ಲದೆ ಹೈಕೋರ್ಟ್ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಪ್ರಕರಣ 2022ರ ಎಪ್ರಿಲ್ನಿಂದ ಹೈಕೋರ್ಟ್ ನಲ್ಲಿ ಬಾಕಿ ಉಳಿದಿದೆ ಎಂದು ಪೀಠದ ಗಮನಕ್ಕೆ ತಂದಿದ್ದಾರೆ.
ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಶಾರ್ಜೀಲ್ ಇಮಾಮ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಫೆಬ್ರವರಿ 2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಶಾರ್ಜೀಲ್ ಇಮಾಮ್ ಸೇರಿದಂತೆ ಇತರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (UAPA) ಮತ್ತು ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ಮಧ್ಯೆ ಈಶಾನ್ಯ ದಿಲ್ಲಿಯಲ್ಲಿ ಗಲಭೆ ನಡೆದಿತ್ತು. ಗಲಭೆಯಲ್ಲಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.