ಮಾನವ ಹಕ್ಕುಗಳ ಕಾರ್ಯಕರ್ತ ನದೀಮ್ ಖಾನ್ ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ದಿಲ್ಲಿ ಹೈಕೋರ್ಟ್

Update: 2024-12-03 07:46 GMT

ನದೀಮ್ ಖಾನ್ (Photo credit: en.wikipedia.org) 

ಹೊಸದಿಲ್ಲಿ: ದಿಲ್ಲಿ ಪೊಲೀಸರು ದಾಖಲಿಸಿರುವ ದ್ವೇಷದ ಉತ್ತೇಜನ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿ ಮಾನವ ಹಕ್ಕುಗಳ ಕಾರ್ಯಕರ್ತ ನದೀಮ್ ಖಾನ್ ಅವರಿಗೆ ದಿಲ್ಲಿ ಹೈಕೋರ್ಟ್ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.

ನಾಗರಿಕ ಹಕ್ಕುಗಳ ರಕ್ಷಣೆ (APCR)ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ನದೀಮ್ ಖಾನ್ ಅವರನ್ನು ಶುಕ್ರವಾರದವರೆಗೆ ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಆದರೆ, ನಾಳೆ ವಿಚಾರಣೆಗೆ ಹಾಜರಾಗುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ಖಾನ್‌ ಗೆ ಕೋರ್ಟ್ ಸೂಚಿಸಿದೆ. ತನಿಖಾಧಿಕಾರಿಗಳ ಅನುಮತಿಯಿಲ್ಲದೆ ರಾಷ್ಟ್ರ ರಾಜಧಾನಿಯನ್ನು ತೊರೆಯದಂತೆ ಅವರಿಗೆ ನಿರ್ದೇಶನ ನೀಡಲಾಗಿದೆ.

ಇದಲ್ಲದೆ ನದೀಮ್ ಖಾನ್ ಮತ್ತು APCR ಸಲ್ಲಿಸಿದ ಅರ್ಜಿ ಗೆ ಸಂಬಂಧಿಸಿ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ನೋಟಿಸ್ ಜಾರಿ ಮಾಡಿದ್ದಾರೆ. ದಿಲ್ಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಖಾನ್ ಕೋರಿದ್ದರು.

ಎಫ್ಐಆರ್‌ ಪ್ರಕಾರ, ನವೆಂಬರ್ 21ರಂದು "ರೆಕಾರ್ಡ್ಸ್ ಆಫ್ ಹಿಂದೂಸ್ತಾನ್ ಇನ್ ಮೋದಿ ಸರ್ಕಾರ್" ಎಂಬ ಶೀರ್ಷಿಕೆಯ ವೀಡಿಯೊವನ್ನು ಯೂಟ್ಯೂಬ್‌ ನಲ್ಲಿ ಪೋಸ್ಟ್ ಮಾಡಲಾಗಿದೆ. ವಸ್ತು ಪ್ರದರ್ಶನದಲ್ಲಿ ಸ್ಟಾಲ್ ಹಾಕಿದ್ದ ವ್ಯಕ್ತಿಯೊಬ್ಬರು ಬ್ಯಾನರ್‌ ನತ್ತ ಸನ್ನೆ ಮಾಡುತ್ತಿದ್ದುದನ್ನು ವೀಡಿಯೊ ತೋರಿಸಿದೆ. ಅವರು ನದೀಮ್, ಅಖ್ಲಾಕ್, ರೋಹಿತ್ ವೇಮುಲಾ, ಪೆಹ್ಲು ಖಾನ್ ಬಗ್ಗೆ ಮಾತನಾಡುತ್ತಿದ್ದರು ಮತ್ತು 2020ರ ಶಾಹೀನ್ ಬಾಗ್ ಪ್ರತಿಭಟನೆಗಳು, ದೆಹಲಿ ಗಲಭೆಗಳನ್ನು ಉಲ್ಲೇಖಿಸಿದ್ದಾರೆ, ಆ ಮೂಲಕ ನಿರ್ದಿಷ್ಟ ಸಮುದಾಯವನ್ನು ಬಲಿಪಶುಗಳಾಗಿ ಚಿತ್ರಿಸಿ ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸ್ಟಾಲ್ ಅನ್ನು ಎಪಿಸಿಆರ್ ವತಿಯಿಂದ ಹಾಕಲಾಗಿದ್ದು ವಿಡಿಯೋದಲ್ಲಿ ಮಾತನಾಡುತ್ತಿರುವ ವ್ಯಕ್ತಿ ಖಾನ್ ಎಂದು ಪೊಲೀಸರು ಆರೋಪಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News