ANI ಮಾಹಿತಿ ಎಡಿಟ್ ಮಾಡಿದವರ ಗುರುತು ಬಹಿರಂಗಪಡಿಸಲು ನಿರಾಕರಣೆ | ವಿಕಿಪೀಡಿಯಾಗೆ ಚಾಟಿ ಬೀಸಿದ ದಿಲ್ಲಿ ಹೈಕೋರ್ಟ್

Update: 2024-10-14 10:47 GMT

ವಿಕಿಪೀಡಿಯಾ ,  ANI(X)

ಹೊಸದಿಲ್ಲಿ: ವಿಕಿಪೀಡಿಯಾ ಪುಟದಲ್ಲಿ ANI ಕುರಿತು ಮಾನಹಾನಿಕರವಾಗಿ ಮಾಹಿತಿ ಎಡಿಟ್ ಮಾಡಿರುವ ತನ್ನ ಬಳಕೆದಾರರ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ನಿರಾಕರಿಸಿದ ವಿಕಿಪೀಡಿಯಾದ ನಿಲುವನ್ನು ದಿಲ್ಲಿ ಹೈಕೋರ್ಟ್ ಸೋಮವಾರ ಪ್ರಶ್ನಿಸಿದೆ.

ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ವಿಭಾಗೀಯ ಪೀಠವು ವಿಕಿಪೀಡಿಯಾವು ಅಂತಹ ನಿಲುವನ್ನು ತೆಗೆದುಕೊಳ್ಳುವ ಮೂಲಕ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿಯಲ್ಲಿ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಗಂಭೀರ ಆರೋಪಗಳಿವೆ ಎಂದು ಹೇಳಿದ ನ್ಯಾಯಾಲಯವು, ಅಗತ್ಯ ಬಿದ್ದರೆ ಗುರುತು ಪತ್ತೆ ಮಾಡಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. ವಿಕಿಪೀಡಿಯಾವು ಯಾರನ್ನು ಬೇಕಾದರೂ ಮಾನಹಾನಿ ಮಾಡುವ ವೇದಿಕೆಯಲ್ಲ ಎಂದೂ ಟೀಕಿಸಿದೆ.

ವಿಕಿಪೀಡಿಯಾವು ಬಳಕೆದಾರರಿಗೆ ಮಾಹಿತಿಯನ್ನು ಪರಿಷ್ಕರಿಸಲು ಅವಕಾಶ ನೀಡಿರುವುದನ್ನು ನ್ಯಾಯಾಲಯವು ಉಲ್ಲೇಖಿಸಿದೆ.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ 'ಏಷ್ಯನ್ ನ್ಯೂಸ್ ಇಂಟರ್‌ನ್ಯಾಶನಲ್ ವರ್ಸಸ್ ವಿಕಿಮೀಡಿಯಾ ಫೌಂಡೇಶನ್' ಎಂಬ ಶೀರ್ಷಿಕೆಯ ಪುಟವನ್ನು ಪ್ರಕಟಿಸಲು ವಿಕಿಪೀಡಿಯಾಗೆ ಅನುಮತಿ ನೀಡುವುದರ ವಿರುದ್ಧ ನ್ಯಾಯಾಲಯವು ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿತು.

ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ಪಟ್ಟಿ ಮಾಡಿದ ನ್ಯಾಯಾಲಯವು ಈ ಸಂಬಂಧ ಸೂಚನೆಗಳನ್ನು ನೀಡಲಾಗುವುದು ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News