ಅರುಂಧತಿ ರಾಯ್‌ ವಿರುದ್ಧ 13 ವರ್ಷ ಹಳೆಯ ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ಅನುಮತಿ ನೀಡಿದ ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌

Update: 2023-10-11 06:10 GMT

ಖ್ಯಾತ ಲೇಖಕಿ ಅರುಂಧತಿ ರಾಯ್‌ (PTI)

ಹೊಸದಿಲ್ಲಿ: ಹದಿಮೂರು ವರ್ಷಗಳ ಹಿಂದೆ 2010ರಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಪ್ರಚೋದನಾತ್ಮಕ ಭಾಷಣಗಳನ್ನು ನೀಡಿದ ಪ್ರಕರಣದಲ್ಲಿ ಖ್ಯಾತ ಲೇಖಕಿ ಅರುಂಧತಿ ರಾಯ್‌ ಮತ್ತು ಕಾಶ್ಮೀರದ ಕೇಂದ್ರೀಯ ವಿವಿಯಲ್ಲಿ ಅಂತರರಾಷ್ಟ್ರೀಯ ಕಾನೂನು ವಿಷಯದ ಮಾಜಿ ಪ್ರೊಫೆಸರ್‌ ಶೇಖ್‌ ಶೌಕತ್‌ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ವಿ ಕೆ ಸಕ್ಸೇನಾ ಅನುಮತಿ ನೀಡಿದ್ದಾರೆ.

ಈ ಪ್ರಕರಣದ ಎಫ್‌ಐಆರ್‌ಗಳನ್ನು ಹೊಸದಿಲ್ಲಿಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನವೆಂಬರ್‌ 27, 2010ರಂದು ದಾಖಲಾಗಿತ್ತು ಎಂದು ಲೆಫ್ಟಿನೆಂಟ್‌ ಗವರ್ನರ್‌ ಅವರ ಕಚೇರಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಐಪಿಸಿಯ ಸೆಕ್ಷನ್‌ 153ಎ, 153ಬಿ ಮತ್ತು 505 ಅನ್ವಯ ಪ್ರಕರಣ ದಾಖಲಾಗಿತ್ತು. ದೇಶದ್ರೋಹದ ಪ್ರಕರಣ ದಾಖಲಾಗಿದ್ದರೂ ಮೇ 5, 2022ರ ಸುಪ್ರೀಂ ಕೋರ್ಟ್‌ ಆದೇಶಾನುಸಾರ ಸೆಕ್ಷನ್‌ 124ಎ ಅನ್ವಯ ಕಾನೂನು ಕ್ರಮಕೈಗೊಳ್ಳಲು ಅನುಮತಿಸಲಾಗಿಲ್ಲ. ಆದರೆ ಉಳಿದ ಸೆಕ್ಷನ್‌ಗಳನ್ವಯ ಪ್ರಕರಣಗಳನ್ನು ಸಿಜೆಐ ನೇತೃತ್ವದ ತಿಸದಸ್ಯ ಪೀಠ ಸಂವಿಧಾನಿಕ ಪೀಠದ ಮುಂದೆ ಸೆಪ್ಟೆಂಬರ್‌ 12, 2023ರಂದು ಇರಿಸಿತ್ತು ಎಂದು ಎಲ್‌ಜಿ ಕಚೇರಿ ತಿಳಿಸಿದೆ.

ಕಾಶ್ಮೀರದ ಸಾಮಾಜಿಕ ಹೋರಾಟಗಾರ ಸುಶೀಲ್‌ ಪಂಡಿತ್‌ ಅವರು ದೂರು ದಾಖಲಿಸಿದವರಾಗಿದ್ದಾರೆ. ರಾಜಧಾನಿಯ ಎಲ್‌ಟಿಜಿ ಸಭಾಂಗಣದಲ್ಲಿ ಅಕ್ಟೋಬರ್‌ 21, 2010ರಂದು ‘ಕಮಿಟಿ ಫಾರ್‌ ದಿ ರಿಲೀಸ್‌ ಆಫ್‌ ಪೊಲಿಟಿಕಲ್‌ ಪ್ರಿಸನರ್ಸ್‌’ ಎಂಬ ಸಂಘಟನೆ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಚೋದನಕಾರಿ ಭಾಷಣ ನೀಡಿದ್ದರೆಂದು ಆರೋಪಿಸಲಾಗಿತ್ತು.

ಇತರ ಇಬ್ಬರು ಆರೋಪಿಗಳಾದ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಸಯೀದ್‌ ಆಲಿ ಶಾ ಗಿಲಾನಿ ಮತ್ತು ದಿಲ್ಲಿ ವಿವಿಯ ಉಪನ್ಯಾಸಕ ಸಯೀದ್‌ ಅಬ್ದುಲ್‌ ರೆಹಮಾನ್‌ ಗಿಲಾನಿ ಅದಾಗಲೇ ಮೃತಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News