ದಿಲ್ಲಿ CRPF ಶಾಲೆ ಬಳಿ ಸ್ಪೋಟ ಪ್ರಕರಣ: ಖಾಲಿಸ್ತಾನಿ ಪರ ಪೋಸ್ಟ್ ವೈರಲ್ ಬೆನ್ನಲ್ಲಿ ಟೆಲಿಗ್ರಾಮ್ ನಿಂದ ಮಾಹಿತಿ ಕೋರಿದ ಪೊಲೀಸರು
ಹೊಸದಿಲ್ಲಿ: ರೋಹಿಣಿಯಲ್ಲಿರುವ ಸಿಆರ್ಪಿಎಫ್(CRPF )ಶಾಲೆಯೊಂದರ ಬಳಿ ರವಿವಾರ ನಡೆದ ಸ್ಪೋಟಕ್ಕೆ ಸಂಬಂಧಿಸಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ಕೈವಾಡದ ಬಗ್ಗೆ ದಿಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಫೋಟದ ಹೊಣೆ ಹೊತ್ತುಕೊಂಡಿರುವ ಖಾಲಿಸ್ತಾನಿ ಪರ ಟೆಲಿಗ್ರಾಮ್ ಖಾತೆಯ ವಿವರಗಳನ್ನು ಕೋರಿ ದಿಲ್ಲಿ ಪೊಲೀಸರು ಸಾಮಾಜಿಕ ಜಾಲತಾಣ ಟೆಲಿಗ್ರಾಮ್ ಗೆ ಪತ್ರವನ್ನು ಬರೆದಿದ್ದಾರೆ. ಖಾಲಿಸ್ತಾನಿ ಪರ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಪ್ರತೀಕಾರವಾಗಿ ಸ್ಫೋಟ ಸಂಭವಿಸಿದೆ ಎಂದು ಹೇಳಿಕೊಂಡ ಟೆಲಿಗ್ರಾಮ್ ಪೋಸ್ಟ್ ವೊಂದು ವೈರಲ್ ಬೆನ್ನಲ್ಲಿ ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
'ಜಸ್ಟೀಸ್ ಲೀಗ್ ಇಂಡಿಯಾ' ಎಂಬ ಹೆಸರಿನ ಟೆಲಿಗ್ರಾಂ ಚಾನಲ್ ಕುರಿತು ತನಿಖಾ ತಂಡವು ವಿವರಗಳನ್ನು ಕೇಳಿದೆ. "ಖಾಲಿಸ್ತಾನಿ ಝಿಂದಾಬಾದ್" ಎಂಬ ವಾಟರ್ ಮಾರ್ಕ್ ನೊಂದಿಗೆ ಸ್ಫೋಟದ ವೀಡಿಯೊವನ್ನು ರವಿವಾರ ಸಂಜೆ ಚಾನಲ್ ನಲ್ಲಿ ಪೋಸ್ಟ್ ಮಾಡಲಾಗಿದೆ. ದಾಳಿಯ ಹಿಂದೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಕೈವಾಡವಿದೆ ಎನ್ನುವ ಮತ್ತು ಬಹಿರಂಗ ಬೆದರಿಕೆಗಳನ್ನು ಹಾಕುವ ಸಂದೇಶವನ್ನು ವೀಡಿಯೊ ಹೊಂದಿತ್ತು.
ರವಿವಾರ ಬೆಳಿಗ್ಗೆ ದಿಲ್ಲಿಯ ರೋಹಿಣಿಯಲ್ಲಿರುವ ಸಿಆರ್ ಪಿಎಫ್ ಶಾಲೆ ಬಳಿ ಪ್ರಬಲ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಶಾಲೆಯ ಗೋಡೆಗೆ ಹಾನಿಯಾಗಿದೆ ಮತ್ತು ಸ್ಫೋಟದ ರಭಸಕ್ಕೆ ಶಾಲೆ ಬಳಿ ನಿಲ್ಲಿಸಿದ್ದ ಕಾರಿನ ಕಿಟಕಿ ಗಾಜುಗಳು ಒಡೆದು ಹೋಗಿವೆ ಮತ್ತು ಆ ಪ್ರದೇಶದಲ್ಲಿನ ಅಂಗಡಿಗಳ ಸೂಚನಾ ಫಲಕಗಳಿಗೆ ಹಾನಿಯಾಗಿದೆ.