G20 ಬಗ್ಗೆ ಟೀಕಾತ್ಮಕ ನಿಲುವು ಹೊಂದಿದ ಹೋರಾಟಗಾರರ ಸಭೆಗೆ ದಿಲ್ಲಿ ಪೊಲೀಸರ ಅಡ್ಡಿ

Update: 2023-08-19 10:44 GMT

Photo credit: thewire.in

ಹೊಸದಿಲ್ಲಿ: ಜಿ20 ಶೃಂಗಸಭೆಯ ಕುರಿತು ಟೀಕಾತ್ಮಕ ನಿಲುವು ಹೊಂದಿರುವ ಹಾಗೂ ಇಂದು ರಾಜಧಾನಿಯ ಸುರ್ಜೀತ್‌ ಭವನದಲ್ಲಿ ನಡೆಯವ ಸಭೆಯ ಸ್ಥಳಕ್ಕೆ ದಿಲ್ಲಿ ಪೊಲೀಸರು ಆಗಮಿಸಿದ್ದಾರೆ.

‘ವಿ20 ಪೀಪಲ್ಸ್‌ ಸಮ್ಮಿಟ್’ ಎಂಬ ಹೆಸರಿನ ಈ ಕಾರ್ಯಕ್ರಮದ ಸ್ಥಳಕ್ಕೆ ಇಂದು ಸುಮಾರು 30 ಪೊಲೀಸರು ಆಗಮಿಸಿ‌ ಸ್ಥಳಕ್ಕೆ ಪ್ರವೇಶಿಸದಂತೆ ತಡೆದು ಆಯೋಜಕರು ಅನುಮತಿ ಪಡೆದಿಲ್ಲ ಎಂದು ಹೇಳಿದ್ದಾರೆ. ಸಭಾಂಗಣದಲ್ಲಿದ್ದ ಕೆಲವರಿಗೆ ಹೊರನಡೆಯುವಂತೆಯೂ ಪೊಲೀಸರು ಸೂಚಿಸಿದರೆಂದು ಆಯೋಜಕರು ಹೇಳಿದ್ದಾರೆ ಎಂದು thewire.in ವರದಿ ಮಾಡಿದೆ.

ಸಭೆಯ ಆಯೋಜಕ ಸಮಿತಿಯ ಭಾಗವಾಗಿರುವ ಲೇಖಕಿ ಮತ್ತು ಹೋರಾಟಗಾರ್ತಿ ಕವಿತಾ ಕಬೀರ್‌ ಪ್ರತಿಕ್ರಿಯಿಸಿ, “ಇವುಗಳು ಮುಚ್ಚಿದ ಬಾಗಿಲ ಸಭೆಗಳು ಮತ್ತು ಅವುಗಳಿಗೆ ಅನುಮತಿ ಬೇಕಿಲ್ಲ,” ಎಂದು ಹೇಳಿದರು.

ಪ್ರಸ್ತುತ ಪೊಲೀಸರು ಸಭಾಭವನದ ಎರಡೂ ಗೇಟುಗಳ ಬಳಿ ನಿಂತು ಜನರನ್ನು ಪ್ರವೇಶಿಸದಂತೆ ತಡೆದಿದ್ದಾರೆ.

ಮೊದಲು ಅಲ್ಲಿದ್ದವರನ್ನು ತೆರಳುವಂತೆ ಪೊಲೀಸರು ಸೂಚಿಸಿದರೂ ಜನರ ಪ್ರತಿರೋಧದ ನಂತರ ಒಳಗೆ ಯಾರನ್ನೂ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಕವಿತಾ ಹೇಳಿದ್ದಾರೆ. ಸ್ಥಳದ ಸಮೀಪ ಪೊಲೀಸರು ಬ್ಯಾರಿಕೇಡ್‌ಗಳನ್ನೂ ಇರಿಸಿದ್ದಾರೆ.

ಇಂದಿನ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌, ಹೋರಾಟಗಾರ್ತಿ ವಂದನಾ ಶಿವ, ಜನತಾ ದಳ (ಯುನೈಟೆಡ್)‌ ಸಂಸದ ಅನೀಲ್‌ ಹೆಗ್ಡೆ ಮಾತನಾಡಲಿದ್ದರು.

ಇಂದಿನ ವಿಷಯ “ಹವಾಮಾನ ಬದಲಾವಣೆ, ಪರಿಸರ , ಜೀವವೈವಿಧ್ಯತೆ ಮತ್ತು ಸಂಬಂಧಿತ ಮಾನವ ಹಕ್ಕುಗಳನ್ನು ಜಿ20 ಮತ್ತು ಇತರ ಜಾಗತಿಕ ವೇದಿಕೆಗಳಲ್ಲಿ ಹೇಳಿಕೊಂಡಂತೆ ಮೋದಿ ಆಡಳಿತ ನಡೆಯುತ್ತಿದೆಯೇ?” ಎಂಬುದಾಗಿದ್ದು ಸುಮಾರು 100 ಜನರು ಭಾಗವಹಿಸುತ್ತಿದ್ದಾರೆನ್ನಲಾಗಿದೆ.

ನಿನ್ನೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಪ್ರತಿಕ್ರಿಯಿಸಿ “ಈ ವ್ಯವಸ್ಥೆಗೆ ಯಾವುದರ ಭಯ? ಮುಚ್ಚಿದ ಸಭಾಂಗಣಗಳಲ್ಲಿ ನಡೆಯುವ ಪ್ರಜಾಪ್ರಭುತ್ವ ಸಭೆಗಳನ್ನೂ ಅವರು ತಡೆಯುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.

ಆಯೋಜಕರಿಗೆ ಅನುಮತಿಯಿಲ್ಲ, ಸಭಾಂಗಣ ಸೀಲ್‌ ಮಾಡಬೇಕಾಗುತ್ತದೆ ಎಂದೂ ಪೊಲೀಸರು ತಿಳಿಸಿದ್ದಾರೆನ್ನಲಾಗಿದೆ.

ಈ ಕುರಿತು ಲಿಖಿತವಾಗಿ ತಿಳಿಸುವಂತೆ ಹೇಳಿದರೆ ನಿರಾಕರಿಸಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಎಪ್ಪತ್ತಕ್ಕೂ ಅಧಿಕ ಜನರ ಆಂದೋಲನಗಳು, ಕಾರ್ಮಿಕ ಸಂಘಟನೆಗಳು, ನಾಗರಿಕ ಸಂಘಟನೆಗಳು ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿಸಿದ್ದು ಸುಮಾರು 500ಕ್ಕೂ ಅಧಿಕ ಅರ್ಥಶಾಸ್ತ್ರಜ್ಞರು, ಹೋರಾಟಗಾರರು, ಪತ್ರಕರ್ತರು ಮತ್ತು ರಾಜಕಾರಣಿಗಳು ಭಾಗವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News