ಆರೋಪಿಗಳ ಶೂಗಳಿಗೆ ಕುಹರ ಮಾಡಿಕೊಟ್ಟ ಚಮ್ಮಾರನಿಗಾಗಿ ದಿಲ್ಲಿ ಪೊಲೀಸರ ಶೋಧ
ಹೊಸದಿಲ್ಲಿ: ಸಂಸತ್ ಭವನದಲ್ಲಿ ಹೊಗೆಬಾಂಬ್ ಸಿಡಿಸಿದ ಪ್ರಕರಣದ ಆರೋಪಿಗಳಾದ ಸಾಗರ್ ಶರ್ಮಾ ಹಾಗೂ ಮನೋರಂಜನ್ ಶಾ ಅವರ ಶೂಗಳಿಗೆ ಕುಹರಗಳನ್ನು ಮಾಡಿಕೊಟ್ಟ ‘ಸೈಕಲ್ವಾಲ ಚಮ್ಮಾರ’ನನ್ನು ಪತ್ತೆಹಚ್ಚಲು ದಿಲ್ಲಿ ಪೊಲೀಸರು ಲಕ್ನೋ ಪೊಲೀಸರ ನೆರವನ್ನು ಕೋರಿದ್ದಾರೆ. ಈ ಪ್ರಕರಣದಲ್ಲಿ ಚಮ್ಮಾರನನ್ನು ಸಾಕ್ಷಿಯಾಗಿಸಲು ದಿಲ್ಲಿ ಪೊಲೀಸರು ಬಯಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಸಾಗರ್ ಮೊದಲಿಗೆ ತಾನಾಗಿಯೇ ಶೂಗಳಲ್ಲಿ ಮಾರ್ಪಾಡುಗಳನ್ನು ಮಾಡಲು ಯತ್ನಿಸಿದ್ದ ಅದು ಸಾಧ್ಯವಾಗದೆ ಇದ್ದಾಗ ಆತ ಬೈಸಿಕಲ್ನಲ್ಲಿ ಆಲಂಬಾಗ್ ಗೆ ಆಗಮಿಸಿದ್ದ ಚಮ್ಮಾರನ ನೆರವು ಪಡೆದುಕೊಂಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಸತ್ ಭವನದ ಮೇಲೆ ಡಿಸೆಂಬರ್ 13ರಂದು ಹೊಗೆಬಾಂಬ್ ದಾಳಿ ನಡೆದ ಆನಂತರ ದಿಲ್ಲಿ ಪೊಲೀಸರು ಈ ಚಮ್ಮಾರನನ್ನು ಹುಡುಕಲು ಲಕ್ನೋಗೆ ಭೇಟಿ ನೀಡಿದ್ದರು.
ಹೊಗೆಬಾಂಬ್ ಸಿಡಿಸುವ ಕ್ಯಾನಿಸ್ಟರ್ಗಳನ್ನು ಬಚ್ಚಿಡಲು ಸಾಗರ್ ಕುಹರಗಳಿರುವ ಶೂಗಳನ್ನು ವಿನ್ಯಾಸಗೊಳಿಸಿದ್ದ. ಸಂಸತ್ ಭವನವನ್ನು ಪ್ರವೇಶಿಸುವಾಗ ಶೂಗಳ ತಳಭಾಗದ ತಪಾಸಣೆ ನಡೆಸಲಾಗುವುದಿಲ್ಲವೆಂಬುದನ್ನು ಆತ ಅರಿತುಕೊಂಡಿದ್ದ.
ಶೂಗಳಲ್ಲಿ ಕುಹರಗಳನ್ನು ಸೃಷ್ಟಿಸುವ ತನ್ನ ಪ್ರಯತ್ನ ಯಸಸ್ವಿಯಾಗದಿದ್ದಾಗ, ಆತ ಅಲಂಭಾಗ್ನಲ್ಲಿರುವ ಚಮ್ಮಾರನಲ್ಲಿಗೆ ತೆರಳಿದ್ದ. ತನ್ನ ಮನೆಯ ಹತ್ತಿರದ ಅಂಗಡಿಯಿಂದ ಎರಡು ಜೋಡಿ ಶೂಗಳನ್ನು ತಲಾ 595 ರೂ.ಳಿಗೆ ಖರೀದಿಸಿದ್ದು, ಆನಂತರ ಬೈಸಿಕಲ್ನಲ್ಲಿ ಆಲಂಭಾಗ್ಗೆ ಆಗಮಿಸುವ ಚಮ್ಮಾರನನ್ನು ಭೇಟಿಯಾಗಿ, ಶೂಗಳಲ್ಲಿ ಕುಹರಗಳನ್ನು ವಿನ್ಯಾಸಗೊಳಿಸಿದ್ದ ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ.
‘‘ಎಡಗಾಲಿನ ಶೂನ ಸೋಲ್ ಅನ್ನು ಕತ್ತರಿಸುವ ಮೂಲಕ ಕುಹರವನ್ನು ಸೃಷ್ಟಿಸಲಾಗಿತ್ತು. ಕುಹರಕ್ಕೆ ಆಧಾರವನ್ನು ನೀಡಲು ತಳಭಾಗದಲ್ಲಿ ಶೂಗಳಿಗೆ ಹೆಚ್ಚುವರಿ ರಬ್ಬರ್ ಸೋಲ್ ಅನ್ನು ಅಂಟಿಸಲಾಗಿತ್ತು. ಬಲಗಾಲಿನ ಶೂನ ಸೋಲ್ನ ಒಳಭಾಗವನ್ನು ಭಾಗಶಃ ಕತ್ತರಿಸಲಾಗಿತ್ತು” ಎಂದು ಮೂಲಗಳು ತಿಳಿಸಿವೆ.
ಸಂಸತ್ ಭವನದ ಭದ್ರತಾ ಉಲ್ಲಂಘನೆಯ ಪ್ರಕರಣದಲ್ಲಿ ಚಮ್ಮಾರನನ್ನು ಸಾಕ್ಷಿಯಾಗಿಸಲು ಪೊಲೀಸರು ಬಯಸಿದ್ದಾರೆ. ಹೀಗಾಗಿ ಆತನ ಅನ್ವೇಷಣೆಗಾಗಿ ಲಕ್ನೋದ ಪೊಲೀಸರು ನೆರವು ಕೋರಿದ್ದಾರೆಂದು ಅವು ಹೇಳಿವೆ.