ಮೆಟ್ರೋ ರೈಲಿನ ಬಾಗಿಲಿಗೆ ಸೀರೆ ಸಿಲುಕಿ ಮಹಿಳೆ ಮೃತ್ಯು; ಎಫ್‍ಐಆರ್ ದಾಖಲಿಸಿಕೊಂಡ ದಿಲ್ಲಿ ಪೊಲೀಸರು

Update: 2024-01-02 08:40 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಕಳೆದ ತಿಂಗಳು ಇಂದರ್ ಲೋಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೊ ರೈಲಿನ ಬಾಗಿಲಿಗೆ ಸೀರೆ ಸಿಲುಕಿ ಮಹಿಳೆ ಮೃತಪಟ್ಟ ಪ್ರಕರಣದ ಸಂಬಂಧ ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಘಟನೆಯ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಬೇಜವಾಬ್ದಾರಿ ಚಾಲನೆ ಅಥವಾ ಸಾರ್ವಜನಿಕ ಮಾರ್ಗದಲ್ಲಿ ಚಾಲನೆ) ಹಾಗೂ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿ ನೇತಾಜಿ ಸುಭಾಷ್ ಪ್ಲೇಸ್ ಮೆಟ್ರೊ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 20ರಂದು ಪ್ರಕರಣ ದಾಖಲಾಗಿದೆ.

ಈ ಬೆಳವಣಿಗೆಯನ್ನು ದೃಢಪಡಿಸಿರುವ ಮೆಟ್ರೊ ಉಪ ಪೊಲೀಸ್ ಆಯುಕ್ತ ರಾಮ್ ನಾಯಕ್, ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಡಿಸೆಂಬರ್ 14ರಂದು ನಡೆದಿದ್ದ ಈ ಘಟನೆಯು ಯಾವ ಸನ್ನಿವೇಶದಲ್ಲಿ ಆಗಿತ್ತು ಎಂದು ಪರಿಶೀಲಿಸಲು ಪೊಲೀಸರು ಸಿಸಿಟಿವಿ ತುಣುಕುಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಮೇಲ್ನೋಟಕ್ಕೆ ಮಹಿಳೆ ರೀನಾರ ಬಟ್ಟೆಯು ರೈಲಿಗೆ ಸಿಲುಕಿಕೊಂಡಿದ್ದರಿಂದ ಅವರು ಕೆಳಗೆ ಬಿದ್ದು ಗಾಯಗೊಂಡ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸಂಶಯಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News