ಬಿಸಿಗಾಳಿಯ ಹೊಡೆತದಿಂದ ದಿಲ್ಲಿ, ರಾಜಸ್ಥಾನ, ಇತರ ರಾಜ್ಯಗಳು ತಲ್ಲಣ : ಐಎಂಡಿಯಿಂದ ರೆಡ್ ಅಲರ್ಟ್
ಹೊಸದಿಲ್ಲಿ : ದೇಶದ ಹಲವು ಭಾಗಗಳಲ್ಲಿ ತೀವ್ರ ಬಿಸಿಗಾಳಿ ಮುಂದುವರಿದಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ರಾಜಸ್ಥಾನ, ದಿಲ್ಲಿ, ಪಂಜಾಬ್, ಹರ್ಯಾಣ, ಚಂಡೀಗಡ ಮತ್ತು ಮಧ್ಯಪ್ರದೇಶಗಳಿಗೆ ಇಂದು ರೆಡ್ ಅಲರ್ಟ್ ಹೊರಡಿಸಿತ್ತು. ಉತ್ತರ ಪ್ರದೇಶಕ್ಕಾಗಿ ಆರೆಂಜ್ ಅಲರ್ಟ್ ಹೊರಡಿಸಲಾಗಿದೆ.
ಮಂಗಳವಾರ ರಾಜಸ್ಥಾನದ ಚುರುದಲ್ಲಿ ದೇಶದಲ್ಲಿಯೇ ಅತ್ಯಂತ ಗರಿಷ್ಠ ಉಷ್ಣಾಂಶ 50.5 ಡಿಗ್ರಿ ಸೆಲ್ಸಿಯಸ್‌ದಾಖಲಾಗಿತ್ತು. ಹರ್ಯಾಣದ ಸಿರ್ಸಾದಲ್ಲಿ 50.3 ಡಿಗ್ರಿ ಸೆಲ್ಸಿಯಸ್, ದಿಲ್ಲಿಯ ಮುಂಗೇಶಪುರದಲ್ಲಿ 49.9 ಡಿಗ್ರಿ ಸೆಲ್ಸಿಯಸ್,ಉತ್ತರ ಪ್ರದೇಶದ ಝಾನ್ಸಿಯಲ್ಲಿ 49.0 ಡಿಗ್ರಿ ಸೆಲ್ಸಿಯಸ್, ಮಧ್ಯಪ್ರದೇಶದ ಪೃಥ್ವಿಪುರದಲ್ಲಿ 48.5 ಡಿಗ್ರಿ ಸೆಲ್ಸಿಯಸ್, ಜಾರ್ಖಂಡ್ನ ಡಾಲ್ಟನ್ಗಂಜ್ನಲ್ಲಿ 47.5 ಡಿಗ್ರಿ ಸೆಲ್ಸಿಯಸ್, ಪಂಜಾಬಿನ ಬಠಿಂಡಾದಲ್ಲಿ 47.2 ಡಿಗ್ರಿ ಸೆಲ್ಸಿಯಸ್, ಬಿಹಾರದ ದೆಹ್ರಿಯಲ್ಲಿ 47.0 ಡಿಗ್ರಿ ಸೆಲ್ಸಿಯಸ್, ಛತ್ತೀಸ್ಗಡದ ಮುಂಗೇಲಿಯಲ್ಲಿ 47.0 ಡಿಗ್ರಿ ಸೆಲ್ಸಿಯಸ್ ಮತ್ತು ಒಡಿಶಾದ ಬೌಧ್ನಲ್ಲಿ 45.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದವು.
ಮೇ 30ರ ಬಳಿಕ ಬಿಸಿಗಾಳಿಯ ತೀವ್ರತೆ ಕಡಿಮೆಯಾಗಬಹುದು ಎಂದು ಐಎಂಡಿಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರಾ ತಿಳಿಸಿದ್ದಾರೆ.
ಮಳೆ ಮುನ್ಸೂಚನೆ: ರೆಮಲ್ ಚಂಡಮಾರುತದ ಹಿನ್ನೆಲೆಯಲ್ಲಿ ಅಸ್ಸಾಂ,ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಜೂ.1ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ನೆಚ್ಚರಿಕೆಯನ್ನು ನೀಡಿದೆ.
ಈ ನಡುವೆ ಮೇ 31ರವರೆಗೆ ಕೇರಳ, ಮಾಹೆ, ಅಂಡಮಾನ್ ಮತ್ತು ನಿಕೋಬಾರ್ ನಡುಗಡ್ಡೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಹಾಗೂ ಉತ್ತರಾಖಂಡ, ಜಮ್ಮು-ಕಾಶ್ಮೀರ, ಗಿಲ್ಗಿಟ್ ಬಾಲ್ಟಿಸ್ತಾನ್, ಮುಝಫ್ಫರಾಬಾದ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಗುಡುಗು-ಸಿಡಿಲು ಮತ್ತು ಧೂಳುಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದೂ ಐಎಂಡಿ ತಿಳಿಸಿದೆ.