"ಹಳಿ ತಪ್ಪಿದ ಸಚಿವ": ಹೆಚ್ಚುತ್ತಿರುವ ರೈಲ್ವೆ ಅಪಘಾತಗಳ ಕುರಿತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮೇಲೆ ಹರಿಹಾಯ್ದ ಕಾಂಗ್ರೆಸ್

Update: 2024-08-02 12:41 GMT

ಗೌರವ್ ಗೊಗೊಯಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ | PC : PTI 

ಹೊಸದಿಲ್ಲಿ: ಕಳೆದ ಎರಡು ತಿಂಗಳಲ್ಲಿ ನಾಲ್ಕು ಗೂಡ್ಸ್ ರೈಲುಗಳು ಹಳಿ ತಪ್ಪಿರುವುದು ಹಾಗೂ ಬಾಲಾಸೋರ್ ಅಪಘಾತದಲ್ಲಿ 300 ಜನರು ಮೃತಪಟ್ಟ ಪ್ರಕರಣವನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ‘ಹಳಿ ತಪ್ಪಿದ ಸಚಿವ’ ಎಂದು ವ್ಯಂಗ್ಯವಾಡಿದರು. ಇತ್ತೀಚೆಗೆ ನಡೆದಿರುವ ರೈಲು ಅಪಘಾತಗಳಿಗೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದೂ ಅವರು ಆಗ್ರಹಿಸಿದರು.

ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಗೌರವ್ ಗೊಗೊಯಿ, “ಅವರು (ಅಶ್ವಿನಿ ವೈಷ್ಣವ್) ಹಳಿ ತಪ್ಪಿದ ಸಚಿವರಾಗಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಅದೆಷ್ಟು ರೈಲುಗಳು ಹಳಿ ತಪ್ಪಿವೆ. ಕಳೆದ ಎರಡು ತಿಂಗಳಲ್ಲಿ ನಾಲ್ಕು ಸರಕು ಸಾಗಣೆ ರೈಲುಗಳು ಹಳಿ ತಪ್ಪಿವೆ. 300 ಮಂದಿ ಸಾವಿಗೆ ಕಾರಣವಾದ ಬಾಲಸೋರ್ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ಸಲ್ಲಿಸಬೇಕಿತ್ತು” ಎಂದು ಅವರು ಪ್ರತಿಪಾದಿಸಿದರು.

ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಅಶ್ವಿನಿ ವೈಷ್ಣವ್, “ನಾವು ರೀಲ್ಸ್ ಮಾಡುವ ಜನರಂತಲ್ಲ. ನಾವು ಕಠಿಣ ಪರಿಶ್ರಮ ಪಡುವವರೇ ಹೊರತು ಪ್ರದರ್ಶನಕ್ಕಾಗಿ ನಿಮ್ಮಂತೆ ರೀಲ್ ಗಳನ್ನು ಮಾಡುವವರಲ್ಲ” ಎಂದು ತಿರುಗೇಟು ನೀಡಿದರು. ರೈಲ್ವೆಯು ದೇಶದ ಜೀವನಾಡಿಯಾಗಿದ್ದು, ದೇಶದ ಆರ್ಥಿಕತೆಗೆ ಮಹತ್ವದ ಸಂಸ್ಥೆಯಾಗಿದೆ ಎಂದು ಒತ್ತಿ ಹೇಳಿದರು. ರೈಲ್ವೆಯನ್ನು ರಾಜಕೀಕರಣಗೊಳಿಸುವ ಬದಲು, ದೇಶದ ಲಾಭಕ್ಕಾಗಿ ಅದನ್ನು ಅಭಿವೃದ್ಧಿ ಪಡಿಸುವತ್ತ ಗಮನ ಕೇಂದ್ರೀಕರಿಸಬೇಕು ಎಂದು ವಿರೋಧ ಪಕ್ಷಗಳ ಸದಸ್ಯರಿಗೆ ಮನವಿ ಮಾಡಿದರು.

ಇದೇ ವೇಳೆ, ಯುಪಿಎ ಸರಕಾರದ ಅವಧಿಯಲ್ಲಿನ ಕಳಪೆ ರೈಲ್ವೆ ಸುರಕ್ಷತೆ ನಿರ್ವಹಣೆಯತ್ತ ಅವರು ಬೊಟ್ಟು ಮಾಡಿದರು. ಕಾಂಗ್ರೆಸ್ 58 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ, ಸ್ವಯಂಚಾಲಿತ ರೈಲು ಭದ್ರತೆ ಸಾಧನವನ್ನು ಏಕೆ ಅಳವಡಿಸಲಿಲ್ಲ ಎಂದೂ ಅವರು ಪ್ರಶ್ನಿಸಿದರು.

ಕಳೆದ ಎರಡು ತಿಂಗಳಲ್ಲಿ ಸರಣಿ ರೈಲು ಅಪಘಾತಗಳು ಸಂಭವಿಸಿದ್ದು, ಈ ಅಪಘಾತಗಳಲ್ಲಿ ಹತ್ತಾರು ಮಂದಿ ಮೃತಪಟ್ಟಿದ್ದಾರೆ, ನೂರಾರು ಮಂದಿ ಗಾಯಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News