ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಕಾನೂನಿನ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾ ಅಧಿಕಾರಿ ನಿಯೋಜಿಸಿ: ಸುಪ್ರೀಂ
ಹೊಸದಿಲ್ಲಿ: ಲೈಂಗಿಕ ಕಿರುಕುಳ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಾಲ್ಕು ವಾರಗಳ ಒಳಗೆ ಜಿಲ್ಲಾ ಅಧಿಕಾರಿಗಳನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.
ಆಂತರಿಕ ದೂರು ಸಮಿತಿಯನ್ನು ಆರಂಭಿಸುವಂತೆ ಕೂಡ ನ್ಯಾಯಾಲಯ ಆಸ್ಪತ್ರೆ, ನರ್ಸಿಂಗ್ ಹೋಮ್, ಕ್ರೀಡಾ ಸಂಸ್ಥೆಗಳಿಗೆ ನಿರ್ದೇಶಿಸಿದೆ.
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ (ತಡೆ, ನಿಷೇಧ ಹಾಗೂ ಪರಿಹಾರ) ಕಾಯ್ದೆ ನಿಯಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಾಧಿಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸರಕಾರೇತರ ಸಂಸ್ಥೆ ‘ಇನೀಷಿಯೇಟಿವ್ಸ್ ಫಾರ್ ಇನ್‌ಕ್ಲೂಸಿವ್ ಫೌಂಡೇಶನ್’ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಹಾಗೂ ದೀಪಂಕರ್ ದತ್ತಾ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿತು.
ಈ ಕಾನೂನಿನ ಪ್ರಕಾರ 10ಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಕಂಪೆನಿಗಳು ಆಂತರಿಕ ದೂರುಗಳ ಸಮಿತಿಯನ್ನು ಹೊಂದಿರಬೇಕು. 10ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪೆನಿಗಳಿಂದ ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಕುರಿತು ದೂರುಗಳನ್ನು ದಾಖಲಿಸಲು ಪ್ರತಿ ಜಿಲ್ಲೆಯೂ ಸ್ಥಳೀಯ ಸಮಿತಿಯನ್ನು ಹೊಂದಿಬೇಕು. ಸ್ಥಳೀಯ ಸಮಿತಿ ಮನೆ ಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು, ನಿರ್ಮಾಣ ಕಾರ್ಮಿಕರು, ನೇಯ್ಗೆಯಲ್ಲಿ ತೊಡಗಿರುವವರು ಮತ್ತು ಮಾನ್ಯತೆ ಪಡೆದ ಆರೋಗ್ಯ ಕಾರ್ಯಕರ್ತರಂತಹ ಅಸಂಘಟಿತ ವಲಯದ ಕಾರ್ಮಿಕರಿಂದ ಕೂಡ ದೂರುಗಳನ್ನು ಸ್ವೀಕರಿಸಬೇಕು.
ಗ್ರಾಮೀಣ ಅಥವಾ ಬುಡಕಟ್ಟು ಪ್ರದೇಶಗಳ ಪ್ರತಿ ಬ್ಲಾಕ್, ತಾಲೂಕು, ತೆಹ್ಸಿಲ್ ಹಾಗೂ ನಗರ ಪ್ರದೇಶಗಳ ಪ್ರತಿ ವಾರ್ಡ್ ಅಥವಾ ನಗರಸಭೆಯಲ್ಲಿ ನೋಡಲ್ ಅಧಿಕಾರಿಯನ್ನು ನಿಯೋಜಿಸುವ ಜವಾಬ್ದಾರಿ ಜಿಲ್ಲಾ ಅಧಿಕಾರಿ ಅವರದ್ದಾಗಿದೆ. ನೋಡಲ್ ಅಧಿಕಾರಿಗಳು ಅಂತಹ ದೂರುಗಳನ್ನು ಸ್ಥಳೀಯ ಸಮಿತಿಗೆ ರವಾನಿಸಬೇಕು.
ಪೀಠ ಕಾಯ್ದೆಯ ಸೆಕ್ಷನ್ 5ನ್ನು ಉಲ್ಲೇಖಿಸಿ ಕಾನೂನನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲೆಯ ಅಧಿಕಾರಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿತು. ಕಾನೂನಿನ ಅನುಷ್ಠಾನದಲ್ಲಿ ಲುಪ್ತತೆ ಹಾಗೂ ಏಕರೂಪತೆಯ ಕೊರತೆ ಬಗ್ಗೆ ದೂರುದಾರರು ಗಮನ ಸೆಳೆದಿರುವುದನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತೆಗೆದುಕೊಂಡಿತು.