ಭೋಪಾಲ ನಿವಾಸದಲ್ಲಿ ‘ಡಿಜಿಟಲ್ ಅರೆಸ್ಟ್’ಗೊಳಗಾಗಿದ್ದ ದುಬೈ‌ ಉದ್ಯಮಿಯನ್ನು ಸಕಾಲದಲ್ಲಿ ರಕ್ಷಿಸಿದ ಪೋಲಿಸರು

Update: 2024-11-13 12:18 GMT

ಸಾಂದರ್ಭಿಕ ಚಿತ್ರ | PC : freepik.com



ಭೋಪಾಲ: ದುಬೈನಲ್ಲಿ ಉದ್ಯಮವನ್ನು ಹೊಂದಿರುವ ವ್ಯಕ್ತಿ ತನ್ನ ಭೋಪಾಲ ನಿವಾಸದಲ್ಲಿ ಸೈಬರ್ ವಂಚಕರಿಂದ ಡಿಜಿಟಲ್ ಬಂಧನಕ್ಕೊಳಗಾಗಿದ್ದು, ಪೋಲಿಸರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಪಾರಾಗಿದ್ದಾರೆ.

‘ನಮಗೆ ಮಾಹಿತಿ ಲಭಿಸಿದ ಬಳಿಕ ಪೋಲಿಸ್ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ತನ್ನ ಮನೆಯ ಕೋಣೆಯಲ್ಲಿ ಸೈಬರ್ ವಂಚಕರಿಂದ ‘ವಿಚಾರಣೆ’ಗೊಳಗಾಗಿದ್ದ ವ್ಯಕ್ತಿಯನ್ನು ತಂಡವು ರಕ್ಷಿಸಿದೆ’ ಎಂದು ರಾಜ್ಯ ಸೈಬರ್ ಸೆಲ್‌ನ ಎಡಿಜಿಪಿ ಯೋಗೇಶ್ ದೇಶಮುಖ್ ಸುದ್ದಿಸಂಸ್ಥೆಗೆ ತಿಳಿಸಿದರು.

ಆರೋಪಿಗಳು ತಾವು ಟ್ರಾಯ್,‌ ಮುಂಬೈ ಸೈಬರ್ ಕ್ರೈಮ್ ಬ್ರ್ಯಾಂಚ್ ಮತ್ತು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡಿದ್ದರು. ನಿಮ್ಮ ಆಧಾರ್ ಕಾರ್ಡ್ ಬಳಸಿ ಹಲವಾರು ವಂಚಕ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಅವರು ಉದ್ಯಮಿಗೆ ತಿಳಿಸಿದ್ದರು.

ಸ್ಕೈಪ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ವ್ಯಕ್ತಿಯನ್ನು ಬಲವಂತಗೊಳಿಸಿದ್ದ ವಂಚಕರು ಬಳಿಕ ಸೂಕ್ಷ್ಮ, ವೈಯಕ್ತಿಕ ಮತ್ತು ಬ್ಯಾಂಕ್ ಮಾಹಿತಿಗಳನ್ನು ಪಡೆದುಕೊಳ್ಳಲು ಅವರನ್ನು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

ಉದ್ಯಮಿಯ ವಿಚಾರಣೆ ನಡೆಯುತ್ತಿದ್ದಾಗಲೇ ಅವರ ನಿವಾಸವನ್ನು ತಲುಪಿದ ಪೋಲಿಸರು ಗುರುತಿನ ಪುರಾವೆಯನ್ನು ತೋರಿಸುವಂತೆ ವಂಚಕರಿಗೆ ಸೂಚಿಸಿದ್ದರು. ತಕ್ಷಣ ಆರೋಪಿಗಳು ವೀಡಿಯೊ ಕರೆಯನ್ನು ಕಡಿತಗೊಳಿಸಿದ್ದರು.

ಪೋಲಿಸರು ಸಕಾಲಕ್ಕೆ ಬರದಿದ್ದರೆ ನಾನು ಕೋಟ್ಯಂತರ ರೂ.ಗಳನ್ನು ವಂಚಕರಿಗೆ ವರ್ಗಾವಣೆ ಮಾಡಿರುತ್ತಿದ್ದೆ ಎಂದು ಉದ್ಯಮಿ ತಿಳಿಸಿದರು.

ಭೋಪಾಲ ನಿವಾಸಿಯ ಈ ಡಿಜಿಟಲ್ ಅರೆಸ್ಟ್ ಪ್ರಕರಣ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಗಮನವನ್ನೂ ಸೆಳೆದಿದೆ. ರಾಜ್ಯಾದ್ಯಂತ ಎಲ್ಲ ಪೋಲಿಸ್ ಠಾಣೆಗಳಲ್ಲಿ ಸೈಬರ್ ಹೆಲ್ಪ್ ಡೆಸ್ಕ್‌ಗಳನ್ನು ರಚಿಸುವಂತೆ ಮತ್ತು ಇಂತಹ ಅಪರಾಧಗಳ ಕುರಿತು ಜಾಗ್ರತಿ ಅಭಿಯಾನಗಳನ್ನು ನಡೆಸುವಂತೆ ಅವರು ಆದೇಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News