ಇವಿಎಂ ವಿಶ್ವಾಸಾರ್ಹತೆ ಬಗ್ಗೆ ದಿಗ್ವಿಜಯ್ ಸಿಂಗ್ ಪ್ರಶ್ನೆ

Update: 2024-01-24 17:08 GMT

ದಿಗ್ವಿಜಯ್ ಸಿಂಗ್ | Photo: PTI  

ಹೊಸದಿಲ್ಲಿ : ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಬುಧವಾರ ಎಲೆಕ್ಟ್ರಾನಿಕ್ ಮತ ಯಂತ್ರ (ಇವಿಎಂ)ದ ವಿಶ್ವಾಸಾರ್ಹತೆಯ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮತ ಪೆಟ್ಟಿಗೆಯಲ್ಲಿ ಹಾಕಲು ವಿವಿಪ್ಯಾಟ್ ಚೀಟಿಯನ್ನು ಮತದಾರರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಚೀಟಿಗಳನ್ನು ಲೆಕ್ಕ ಮಾಡಿದ ಬಳಿಕ ಚುನಾವಣಾ ಫಲಿತಾಂಶ ಘೋಷಿಸಬೇಕು ಎಂದು ಅವರು ಹೇಳಿದ್ದಾರೆ. ಭಾರತ, ಆಸ್ಟ್ರೇಲಿಯಾ, ನೈಜೀರಿಯಾ, ವೆನೆಝುವೆಲಾ ಹಾಗೂ ಬ್ರೆಝಿಲ್ ನಲ್ಲಿ ಮಾತ್ರ ಮತದಾನ ನಡೆಸಲು ಇವಿಎಂಗಳನ್ನು ಬಳಸಲಾಗುತ್ತದೆ. ಆಸ್ಟ್ರೇಲಿಯಾದ ಮತ ಯಂತ್ರಗಳಲ್ಲಿ ಬಳಸುವ ಸಾಫ್ಟವೇರ್ ಅನ್ನು ಸಾಮಾಜಿಕ ಜಾಲ ತಾಣದಲ್ಲಿ ಇರಿಸಲಾಗುತ್ತದೆ. ಅದನ್ನು ಯಾರು ಕೂಡ ಪಡೆಯಬಹುದಾಗಿದೆ.

‘‘ಆದರೆ, ಭಾರತದಲ್ಲಿ ಇದು ಸಾಧ್ಯವಿಲ್ಲ. ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ಅದನ್ನು (ಸಾಫ್ಟ್ವೇರ್) ಸಾಮಾಜಿಕ ಜಾಲ ತಾಣದಲ್ಲಿ ಇರಿಸುವುದಿಲ್ಲ’’ ಎಂದು ವಿವಿಪ್ಯಾಟ್ ಯಂತ್ರ ಸರಿಯಾದ ಮತಗಳನ್ನು ದಾಖಲಿಸಿಕೊಳ್ಳುವುದಿಲ್ಲ ಎಂಬುದನ್ನು ಪ್ರದರ್ಶಿಸಲು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘‘ಮತ ಪತ್ರದ ಮೂಲಕ ಮತದಾನ ನಡೆಸಲು ಸಾಧ್ಯವಾಗದೇ ಇದ್ದರೆ, ವಿವಿಪ್ಯಾಟ್ ಚೀಟಿಗಳನ್ನು ಮತದಾರರಿಗೆ ಹಸ್ತಾಂತರಿಸಬೇಕು. ಅವರು ಅದನ್ನು ಪರಿಶೀಲಿಸಿ ಮತ ಪೆಟ್ಟಿಗೆಯಲ್ಲಿ ಹಾಕಲು ಅವಕಾಶ ನೀಡಬೇಕು’’ ಎಂದು ಅವರು ತಿಳಿಸಿದರು.

ಸಿಂಗ್ ಮತ್ತು ಗುಜರಾತ್ ಮೂಲದ ಕಂಪ್ಯೂಟರ್ ಎಂಜಿನಿಯರ್ ಅತುಲ್ ಪಟೇಲ್ ವಿವಿಪ್ಯಾಟ್ ಗಳು ಮತಗಳನ್ನು ಹೇಗೆ ದಾಖಲಿಸಿಕೊಳ್ಳುತ್ತದೆ ಎಂದು ಪ್ರದರ್ಶಿಸಿದರು.

ಮತ ಯಂತ್ರದ ಗುಂಡಿಯನ್ನು ದೀರ್ಘ ಕಾಲ ಒತ್ತಿ ಹಿಡಿದರೆ, ಅದು ಹಲವು ಮತಗಳನ್ನು ದಾಖಲಿಸುತ್ತದೆ. ಅಲ್ಲದೆ, ಜನರು ತಾವು ನಿಜವಾಗಿ ಮತ ಹಾಕಲು ಬಯಸುವ ಚಿಹ್ನೆಗೆ ಮತವನ್ನು ದಾಖಲಿಸಿಕೊಳ್ಳುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.

ಪ್ರದರ್ಶನದ ಸಂದರ್ಭ ಬಾಳೆ ಹಣ್ಣು, ಆ್ಯಪಲ್ ಹಾಗೂ ಕಲ್ಲಂಗಡಿಯಂತಹ ಕಾಲ್ಪನಿಕ ಚಿಹ್ನೆಗಳಿಗೆ 10 ಮತಗಳನ್ನು ಚಲಾಯಿಸಲಾಯಿತು. ಬಾಳೆಹಣ್ಣಿಗೆ 4, ಆ್ಯಪಲ್ ಗೆ 5 ಹಾಗೂ ಕಲ್ಲಂಗಡಿಗೆ 1 ಮತಗಳು ದೊರಕಿದವು. ಆದರೆ, ಚೀಟಿಯನ್ನು ಲೆಕ್ಕ ಹಾಕಿದಾಗ ಆ್ಯಪ್ಲ್ಗೆ 8, ಬಾಳೆಹಣ್ಣಿಗೆ 3 ಹಾಗೂ ಕಲ್ಲಂಗಡಿಗೆ 1 ಮತ ಬಿದ್ದಿದೆ. ಇದು ಇವಿಎಂ ಸರಿಯಾದ ಮತಗಳನ್ನು ದಾಖಲಿಸಿಕೊಳ್ಳುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ತಿಳಿಸಿದರು.

ಆ್ಯಪಲ್ ವಿಜಯ ಸಾಧಿಸುವಂತೆ ಯಂತ್ರವನ್ನು ಪ್ರೋಗ್ರಾಮ್ ಮಾಡಿರುವುದರಿಂದ ಬಾಳೆಹಣ್ಣಿಗೆ ಹಾಕಿದ ಮತಗಳು ಆ್ಯಪಲ್ ಗೆ ವರ್ಗಾವಣೆಯಾಯಿತು ಎಂದು ಅವರು ದಿಗ್ವಿಜಯ್ ಸಿಂಗ್ ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News