ರಾಷ್ಟ್ರಪತಿಗಳ ಭಾಷಣದಲ್ಲಿ ಅಲ್ಪಸಂಖ್ಯಾತರನ್ನು ಉಲ್ಲೇಖಿಸದ್ದು ನಿರಾಶೆಯನ್ನುಂಟು ಮಾಡಿದೆ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶವನ್ನುದ್ದೇಶಿಸಿ ಮಾಡಿದ್ದ ಭಾಷಣದ ಬಗ್ಗೆ ಸೋಮವಾರ ನಿರಾಶೆ ವ್ಯಕ್ತಪಡಿಸಿದ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು, ಅದು ಸಮಾಜದ ಅತ್ಯಂತ ದುರ್ಬಲ ವರ್ಗಗಳಿಗೆ ಸೌಲಭ್ಯಗಳ ಕೊರತೆಯಂತಹ ಮೂಲಭೂತ ಸಮಸ್ಯೆಗಳನ್ನು ಕಡೆಗಣಿಸಿ ಬರೀ ಸರಕಾರದ ಹೊಗಳಿಕೆಗಳಿಂದಲೇ ತುಂಬಿತ್ತು ಎಂದು ಹೇಳಿದರು. ರಾಷ್ಟ್ರಪತಿಗಳ ಭಾಷಣವನ್ನು ಸರಕಾರವೇ ಸಿದ್ಧಪಡಿಸಿತ್ತು ಎಂದರು.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸುತ್ತಿದ್ದ ಅವರು, ಸದನದಲ್ಲಿ ‘ಜೈ ಸಂವಿಧಾನ’ ಘೋಷಣೆಯೊಂದಿಗೆ ಸಮಸ್ಯೆಗಳನ್ನು ಹೊಂದಿರುವ ಸಂಸದರು ಮತ್ತು ಪಕ್ಷಗಳಿವೆ ಎಂದರು.
ರಾಷ್ಟ್ರಪತಿಗಳ ಭಾಷಣದಲ್ಲಿ ಯಾವುದೇ ದೂರದೃಷ್ಟಿ ಮತ್ತು ನಿರ್ದೇಶನ ಇಲ್ಲ. ಅದರಲ್ಲಿ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ಉಲ್ಲೇಖವಿಲ್ಲ ಎಂದು ಖರ್ಗೆ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಟೀಕಾ ಪ್ರಹಾರ ನಡೆಸಿದ ಖರ್ಗೆ,ಪ್ರತಿಪಕ್ಷಗಳು ಜನಸಾಮಾನ್ಯರ ಸಂಕಷ್ಟಗಳ ಕುರಿತು ಮಾತನಾಡುತ್ತಿವೆ,ಆದರೆ ಮೋದಿ ಕೇವಲ ತನ್ನ ‘ಮನ್ ಕಿ ಬಾತ್’ ಮಾಡುತ್ತಾರೆ ಎಂದರು. ಕಳೆದ ಒಂದು ವರ್ಷದಿಂದ ಹೊತ್ತಿ ಉರಿಯುತ್ತಿರುವ ಮಣಿಪುರಕ್ಕೆ ಭೇಟಿ ನೀಡದ್ದಕ್ಕಾಗಿಯೂ ಮೋದಿ ವಿರುದ್ಧ ದಾಳಿ ನಡೆಸಿದ ಖರ್ಗೆ,ಅವರು ಕೇವಲ ಘೋಷಣೆಗಳನ್ನು ನೀಡುವುದರಲ್ಲಿ ನಿಪುಣರಾಗಿದ್ದಾರೆ ಎಂದರು.
ಪ್ರಧಾನಿ ಮೋದಿ ಚುನಾವಣೆಗಳ ಸಂದರ್ಭದಲ್ಲಿ ತನ್ನ ಭಾಷಣಗಳಿಂದ ಸಮಾಜವನ್ನು ವಿಭಜಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ ಖರ್ಗೆ,ಹಿಂದಿನ ಯಾವ ಪ್ರಧಾನಿಯೂ ಇದನ್ನು ಮಾಡಿರಲಿಲ್ಲ ಎಂದರು.
ಮಹಾತ್ಮಾ ಗಾಂಧಿ ಮತ್ತು ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸಂಸತ್ ಸಂಕೀರ್ಣದಲ್ಲಿಯ ಅವುಗಳ ಮೂಲಸ್ಥಳಗಳಲ್ಲಿ ಮರುಸ್ಥಾಪಿಸುವಂತೆ ಅವರು ರಾಜ್ಯಸಭೆಯ ಸಭಾಪತಿಗಳನ್ನು ಆಗ್ರಹಿಸಿದರು.
ಈ ಪ್ರತಿಮೆಗಳನ್ನು ಸಂಸತ್ ಸಂಕೀರ್ಣದ ಹಿಂಭಾಗದಲ್ಲಿರುವ ‘ಪ್ರೇರಣಾ ಸ್ಥಳ’ಕ್ಕೆ ಸ್ಥಳಾಂತರಿಸಿದ್ದು,ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿರುವ ಪ್ರತಿಪಕ್ಷಗಳು ಅದನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸುತ್ತಿವೆ.