ಅಡ್ ಹಾಕ್ ಕುಸ್ತಿ ಸಮಿತಿ ವಿಸರ್ಜನೆ: ಐಒಎ ನಿರ್ಧಾರ ಖಂಡಿಸಿದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್
ಹೊಸದಿಲ್ಲಿ : ಅಡ್ ಹಾಕ್ ಕುಸ್ತಿ ಸಮಿತಿಯನ್ನು ವಿಸರ್ಜಿಸಿ ವಿವಾದದಿಂದ ಸುದ್ದಿಯಾಗಿರುವ ಭಾರತದ ಕುಸ್ತಿ ಒಕ್ಕೂಟಕ್ಕೆ(ಡಬ್ಲ್ಯುಎಫ್ಐ)ಸಂಪೂರ್ಣ ಆಡಳಿತಾತ್ಮಕ ನಿಯಂತ್ರಣವನ್ನು ನೀಡುವ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ನ(ಐಒಎ)ನಿರ್ಧಾರವನ್ನು ಭಾರತೀಯ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಹಾಗೂ ಸಾಕ್ಷಿ ಮಲಿಕ್ ತೀವ್ರವಾಗಿ ಖಂಡಿಸಿದ್ದಾರೆ. ಭಾರತೀಯ ಕ್ರೀಡೆಗಳಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಂತಹ ದಮನಕಾರಿ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಈ ಹಿಂದೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವ ಇಬ್ಬರು ಕುಸ್ತಿಪಟುಗಳು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವ್ಯಕ್ತಪಡಿಸಿರುವ ಸಂದೇಶಗಳಲ್ಲಿ ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದಾರೆ.
ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ನ ಈ ನಿರ್ಧಾರದಿಂದಾಗಿ 2023ರ ಡಿಸೆಂಬರ್ನಲ್ಲಿ ಆಯ್ಕೆಯಾಗಿರುವ ಸಂಜಯ್ ಸಿಂಗ್ ನೇತೃತ್ವದ ಗುಂಪು ಅಧಿಕಾರಕ್ಕೆ ಬರಲಿದೆ.
ಈ ದೇಶದ ಶಕ್ತಿಶಾಲಿ ಜನರು ಶತಮಾನಗಳಿಂದಲೂ ಮಹಿಳೆಯರ ಗೌರವದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂಬುದನ್ನು ಇತಿಹಾಸ ಸಾಕ್ಷಿಯಾಗಿದೆ ಎಂದು ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ತಮ್ಮ ಸಾಮಾಜಿಕ ಮಾಧ್ಯಮ ಚಾನಲ್ಗಳಲ್ಲಿ ಬರೆದಿದ್ದಾರೆ.
ಇಂದು 21ನೇ ಶತಮಾನದಲ್ಲಿ ನಾವು ಧೈರ್ಯವನ್ನು ತೋರಿಸಿದ್ದೇವೆ. ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ನಮ್ಮ ಧ್ವನಿ ಎತ್ತಿದ್ದೇವೆ. ಛಲದಿಂದ ಹೋರಾಡಿದ್ದೇವೆ. ಇದರಿಂದ ದುಷ್ಕರ್ಮಿಯನ್ನು ಭಾರತೀಯ ಕುಸ್ತಿ ಸಂಸ್ಥೆಯಿಂದ ತೆಗೆದುಹಾಕಬಹುದು ಹಾಗೂ ಮಹಿಳಾ ಕುಸ್ತಿಪಟುಗಳನ್ನು ಸುರಕ್ಷಿತವಾಗಿರಿಸಬಹುದು ಎಂದು ಸಾಕ್ಷಿ ಹೇಳಿದ್ದಾರೆ.
ಆದರೆ ಶ್ರೀಮಂತ ದುಷ್ಕರ್ಮಿ ಎಷ್ಟು ಶಕ್ತಿಶಾಲಿ ಎಂದರೆ ಆತನು ಸರಕಾರ, ಸಂವಿಧಾನ ಹಾಗೂ ನ್ಯಾಯಾಂಗಕ್ಕಿಂತ ಮೇಲಿದ್ದಾನೆ. ಸರಕಾರವು ಕುಸ್ತಿ ಸಂಸ್ಥೆಯನ್ನು ಅಮಾನತುಗೊಳಿಸಿದ ನಂತರ ಬ್ರಿಜ್ ಭೂಷಣ್ ಹಾಗೂ ಸಂಜಯ್ ಸಿಂಗ್, ಈ ಅಮಾನತು ಕೇವಲ ನಾಟಕವಾಗಿದೆ. ಕೆಲ ದಿನಗಳ ನಂತರ ನಮಗೆ ಅಧಿಕಾರ ಸಿಗಲಿದೆ. ನಾವು ಕುಸ್ತಿ ಸಂಸ್ಥೆಯ ಮೇಲೆ ಶಾಶ್ವತವಾಗಿ ಹಿಡಿತ ಸಾಧಿಸುತ್ತೇವೆ ಎಂದು ಹೇಳಿಕೆಗಳನ್ನು ನೀಡುತ್ತಲೇ ಇದ್ದರು. ಇದು ನಿಜವೆಂದು ಸಾಬೀತಾಗಿದೆ. ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ನ ಈ ಪತ್ರವು ಇದನ್ನು ಅಧಿಕೃತವಾಗಿ ದೃಢಪಡಿಸಿದೆ. ಈ ನವ ಭಾರತದಲ್ಲೂ ಕೂಡ ಮಹಿಳೆಯರನ್ನು ಅವಮಾನಿಸುವ ಹಳೆಯ ಸಂಪ್ರದಾಯವು ಮುಂದುವರಿಯುತ್ತದೆ ಎಂದು ಸಾಬೀತುಪಡಿಸಿದೆ. ಜೈ ಭಾರತ್ ಮಾತಾ ಈ ದೇಶದ ಪ್ರತಿಯೊಬ್ಬ ತಾಯಿಗೂ ಜೈ ಎಂದು ಸಾಕ್ಷಿ ಹೇಳಿದ್ದಾರೆ.
ಸಂಜಯ್ ಸಿಂಗ್ ನೇತೃತ್ವದ ಹೊಸ ಡಬ್ಲ್ಯುಎಫ್ಐ ಆಡಳಿತ ಮಂಡಳಿಯು ತನ್ನ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭೂಪೆಂದರ್ ಸಿಂಗ್ ಬಾಜ್ವಾ ನೇತೃತ್ವದ ಆಡ್ ಹಾಕ್ ಸಮಿತಿಯನ್ನು ರಚಿಸಲಾಗಿತ್ತು. ಮುಂದಿನ ತಿಂಗಳು ನಡೆಯಲಿರುವ ಏಶ್ಯನ್ ಚಾಂಪಿಯನ್ಶಿಪ್ ಹಾಗೂ ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ಗಳಿಗೆ ತಂಡಗಳನ್ನು ಆಯ್ಕೆ ಮಾಡಲು ಅಡ್-ಹಾಕ್ ಸಮಿತಿಯು ಈ ತಿಂಗಳಾರಂಭದಲ್ಲಿ ಟ್ರಯಲ್ಸ್ ಅನ್ನು ಆಯೋಜಿಸಿತ್ತು.ಟ್ರಯಲ್ಸ್ ಅನ್ನು ಯಶಸ್ವಿಯಾಗಿ ಆಯೋಜಿಸಿದ ನಂತರ ಡಬ್ಲ್ಯುಎಫ್ಐಗೆ ಅಧಿಕಾರವನ್ನು ಹಸ್ತಾಂತರಿಸಲಾಗಿದೆ.
ಇದೇ ವೇಳೆ ವಿನೇಶ್ ಕೂಡ ಸಾಕ್ಷಿಯ ಭಾವನೆಗಳಿಗೆ ಧ್ವನಿಗೂಡಿಸಿದರು.
ಪ್ರಧಾನಿ ಸ್ಪಿನ್ ಮಾಸ್ಟರ್ ಆಗಿದ್ದಾರೆ. ತಮ್ಮ ಪ್ರತಿಸ್ಫರ್ಧಿಗಳ ಭಾಷಣಕ್ಕೆ ಪ್ರತಿಯಾಗಿ ಮಹಿಳಾ ಶಕ್ತಿಯನ್ನು ಉಲ್ಲೇಖಿಸುವ ಮೂಲಕ ವಿಚಾರವನ್ನು ಹೇಗೆ ತಿರುಚಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಏಶ್ಯನ್ ಗೇಮ್ಸ್ ಚಾಂಪಿಯನ್ ವಿನೇಶ್ ಎಕ್ಸ್ ನಲ್ಲಿ ಬರೆದಿದ್ದಾರೆ.
ನರೇಂದ್ರ ಮೋದಿಜೀ ಸ್ತ್ರೀ ಶಕ್ತಿಯ ನಿಜವಾದ ಸತ್ಯವನ್ನು ನಾವು ತಿಳಿದುಕೊಳ್ಳೋಣ. ಮಹಿಳಾ ಕುಸ್ತಿಪಟುವನ್ನು ಶೋಷಿಸಿದ ಬ್ರಿಜ್ ಭೂಷಣ್ ಮತ್ತೆ ಕುಸ್ತಿ ಸಂಸ್ಥೆಯೊಳಗೆ ಹಿಡಿತ ಸಾಧಿಸಿದ್ದಾರೆ. ನೀವು ಮಹಿಳೆಯರನ್ನು ಗುರಾಣಿಯನ್ನಾಗಿ ಬಳಸದೆ, ಅಂತಹ ದಬ್ಬಾಳಿಕೆ ನಡೆಸುವವರನ್ನು ದೇಶದ ಕ್ರೀಡಾ ಸಂಸ್ಥೆಗಳಿಂದ ಹೊರ ಹಾಕಲು ಏನಾದರೂ ಮಾಡುತ್ತೀರಿ ಎಂದು ಭಾವಿಸುವೆ ಎಂದು ಮುಂದಿನ ತಿಂಗಳು ನಡೆಯಲಿರುವ 50 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಭಾಗವಹಿಸಲಿರುವ ವಿನೇಶ್ ಎಕ್ಸ್ನಲ್ಲಿ ಬರೆದಿದ್ದಾರೆ.
ಅಮಾನತು ಹಿಂಪಡೆಯುವಂತೆ ಮಾಡಲು ಡಬ್ಲ್ಯುಎಫ್ಐ ವಂಚಕ ಮಾರ್ಗಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದ ಸಾಕ್ಷಿ ಹಾಗೂ ಬಜರಂಗ್, ಹೊಸತಾಗಿ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಮೂವರು ಪ್ರಮುಖ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಡಬ್ಲ್ಯುಎಫ್ಐನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಅತ್ಯಾಪ್ತ ಸಂಜಯ್ ಸಿಂಗ್ ಡಬ್ಲ್ಯುಎಫ್ಐ ಅಧ್ಯಕ್ಷನಾಗಿ ಆಯ್ಕೆಯಾಗಿರುವುದಕ್ಕೆ ವಿನೇಶ್, ಸಾಕ್ಷಿ ಹಾಗೂ ಬಜರಂಗ್ ಪುನಿಯಾ ಈ ಮೊದಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಸಂಜಯ್ ಸಿಂಗ್ ಡಬ್ಲ್ಯುಎಫ್ಐ ಅಧ್ಯಕ್ಷನಾಗಿ ನೇಮಕಗೊಂಡ ನಂತರ ಸಾಕ್ಷಿ ಮಲಿಕ್ ಕುಸ್ತಿಯಿಂದಲೇ ನಿವೃತ್ತಿಯಾಗುವುದಾಗಿ ಪ್ರಕಟಿಸಿದ್ದರು.