ವಕ್ಫ್ ತಿದ್ದುಪಡಿ ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾದ ಡಿಎಂಕೆ

photo | PTI
ಚೆನ್ನೈ: ಲೋಕಸಭೆಯಲ್ಲಿ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಮುಂದಾಗಿದೆ.
ವಕ್ಫ್ ಮಸೂದೆ ಅಂಗೀಕಾರದ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ವಕ್ಫ್ ಮಸೂದೆ ವಿಚಾರದಲ್ಲಿ ತಮಿಳುನಾಡು ಸರಕಾರ ಬಿಜೆಪಿ ವಿರುದ್ಧ ಕಾನೂನು ಹೋರಾಟವನ್ನು ನಡೆಸಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಡಿಎಂಕೆ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಕಪ್ಪು ಪಟ್ಟಿ ಧರಿಸಿದ್ದರು. ಮಾರ್ಚ್ 27ರಂದು ತಮಿಳುನಾಡು ವಿಧಾನಸಭೆಯು ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಲು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿತ್ತು.
ಕೇಂದ್ರ ಸಂಸದೀಯ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಸುದೀರ್ಘ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಮಸೂದೆಯ ಪರವಾಗಿ 288 ಮತಗಳು ಮತ್ತು ಮಸೂದೆಯ ವಿರುದ್ಧವಾಗಿ 232 ಮತಗಳು ಚಲಾವಣೆಯಾಗಿದ್ದವು. ಲೋಕಸಭೆಯಲ್ಲಿ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾಗಿತ್ತು.