ತಮಿಳುನಾಡು | ಶಾಲಾ ಹಾಸ್ಟೆಲ್‌ನಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ; ವೈದ್ಯನ ಬಂಧನ

Update: 2024-09-05 05:52 GMT

Photo : ANI

ಚೆನ್ನೈ : ತಿರುಚ್ಚಿಯ ಸರ್ಕಾರಿ ಅನುದಾನಿತ ಶಾಲಾ ಹಾಸ್ಟೆಲ್‌ನಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವೈದ್ಯನೋರ್ವನನ್ನು ಬಂಧಿಸಲಾಗಿದೆ.

ಎಸ್ ಸ್ಯಾಮ್ಸನ್ ಡೇನಿಯಲ್(31) ಬಂಧಿತ ವೈದ್ಯ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ ಆತನ ತಾಯಿ, ಶಾಲೆಯ ಪ್ರಾಂಶುಪಾಲೆ ಎಸ್ ಗ್ರೇಸ್ ಸಗಾಯರಾಣಿ(54) ಅವರನ್ನು ಅಪರಾಧವನ್ನು ಮುಚ್ಚಿಡಲು ಸಹಾಯ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಅವರನ್ನು 3 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆ ಬಂದ ನಂತರ ಆಪಾದಿತ ಘಟನೆ ಬೆಳಕಿಗೆ ಬಂದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕರೆಯನ್ನು ಅನುಸರಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಇತರ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳನ್ನು ಸಂದರ್ಶಿಸಿ ಮಾತುಕತೆಯನ್ನು ನಡೆಸಿದ್ದು, ಈ ವೇಳೆ ಡೇನಿಯಲ್ ತನ್ನ ಸಮಾಲೋಚನೆಯ ಸಮಯದಲ್ಲಿ ಹಲವಾರು ತಿಂಗಳುಗಳಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಬಯಲಾಗಿದೆ.

2017ರಲ್ಲಿ ಪುದುಚೇರಿಯಿಂದ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದ ನಂತರ 2021ರಲ್ಲಿ ತನ್ನ ಸರ್ಕಾರಿ ಸೇವೆಯನ್ನು ಪ್ರಾರಂಭಿಸಿದ್ದ ಆರೋಪಿ ಸ್ಯಾಮ್ಸನ್, ತಿರುಚಿರಾಪಳ್ಳಿಗೆ ವರ್ಗಾವಣೆಯಾಗುವ ಮೊದಲು ತೂತುಕುಡಿಯಲ್ಲಿದ್ದನು ಎನ್ನಲಾಗಿದೆ. ಸ್ಯಾಮ್ಸನ್‌ನ ತಾಯಿ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾಗಿದ್ದರು. ಸ್ಯಾಮ್ಸನ್‌ ವೈದ್ಯಕೀಯ ಸೇವೆ ನೀಡುವ ನೆಪದಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಕಿರುಕುಳ ನೀಡಲು ತನ್ನ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News