"ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ": ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಪದ್ಧತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಈ ಪದ್ಧತಿಯು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
"ಅದು ಕೇವಲ ಹಣೆಪಟ್ಟಿಯಾಗಿದ್ದು, ಯಾರನ್ನಾದರೂ ಉಪ ಮುಖ್ಯಮಂತ್ರಿ ಎಂದು ಕರೆದರೂ, ಅದು ವಾಸ್ತವ ಸ್ಥಿತಿಯನ್ನು ಬದಲಿಸುವುದಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡಿದ್ದ ನ್ಯಾಯ ಪೀಠವು ಅಭಿಪ್ರಾಯ ಪಟ್ಟಿತು. ಪಬ್ಲಿಕ್ ಪೊಲಿಟಿಕಲ್ ಪಾರ್ಟಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು.
"ಉಪ ಮುಖ್ಯಮಂತ್ರಿಯು ರಾಜ್ಯ ಸರ್ಕಾರದಲ್ಲಿ ಪ್ರಥಮ ಹಾಗೂ ಪ್ರಮುಖ ಸಚಿವರಾಗಿದ್ದು, ಇದರಿಂದ ಸಂವಿಧಾನದ ಉಲ್ಲಂಘನೆಯಾಗುವುದಿಲ್ಲ ಹಾಗೂ ಇದು ತನಗೆ ತಾನೆ ಯಾವುದೇ ಶ್ರೇಣಿಯನ್ನೂ ಸೃಷ್ಟಿಸುವುದಿಲ್ಲ" ಎಂದು ನ್ಯಾಯಪೀಠವು ಹೇಳಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರ ಪರ ವಾದಿಸಿದ ವಕೀಲರು, ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಮೂಲಕ ಕೆಟ್ಟ ಉದಾಹರಣೆಗಳನ್ನು ಮುಂದಿಡಲಾಗುತ್ತಿದೆ ಹಾಗೂ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಅನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿದರು. ಆದರೆ, ಅವರ ವಾದವನ್ನು ನ್ಯಾಯಾಲಯವು ತಳ್ಳಿ ಹಾಕಿತು.