ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದ ಕಪಿಮುಷ್ಠಿಯಿಂದ ರಕ್ಷಿಸಲು ಮತದಾನ ಮಾಡಿ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ: ಮತದಾರರು ಮತಗಟ್ಟೆಗೆ ಬಂದು ನಮ್ಮ ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದ ಕಪಿಮುಷ್ಠಿಯಿಂದ ರಕ್ಷಿಸಲು ಮತ ಚಲಾಯಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭ ಮತದಾರರಿಗೆ ಅವರು ಈ ಅಪೀಲು ಮಾಡಿದ್ದಾರೆ. ಇದೇನು ಸಾಮಾನ್ಯ ಚುನಾವಣೆಯಲ್ಲ, ಗಮನ ಬೇರೆಡೆಗೆ ಹರಿಸುವ ತಂತ್ರಗಾರಿಕೆಗೆ ಬಲಿ ಬೀಳದಂತೆ ಅವರು ಮತದಾರರಿಗೆ ಆಗ್ರಹಿಸಿದ್ದಾರೆ.
“ಮತದಾನದ ವೇಳೆ ಬಟನ್ ಒತ್ತುವ ಮುನ್ನ ನಿಮ್ಮ ಹೃದಯಗಳಲ್ಲಿ ಸಂವಿಧಾನದ ಆಶಯಗಳು ಪ್ರತಿಧ್ವನಿಸಬೇಕು,” ಎಂದು ಅವರು ಹೇಳಿದರು.
ಮೊದಲ ಬಾರಿಯ ಮತದಾರರು ದೊಡ್ಡ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಪ್ರಜಾಪ್ರಭುತ್ವದ ಉಳಿವಿಗಾಗಿನ ಈ ಆಂದೋಲನದಲ್ಲಿ ಅವರೇ ಬದಲಾವಣೆಯ ಹರಿಕಾರರು ಎಂದು ಖರ್ಗೆ ಹೇಳಿದ್ದಾರೆ.
“ನಾವು, ಇಂಡಿಯಾದ ಜನರು – ನಮ್ಮ ದೇಶದ ಸಂವಿಧಾನದ ಆತ್ಮ ನಿಮ್ಮ ಹೃದಯ ಮತ್ತು ಮನಸ್ಸುಗಳಲ್ಲಿ ನೀವು ಮತದಾನದ ಗುಂಡಿ ಒತ್ತುವ ಮುನ್ನ ಪ್ರತಿಧ್ವನಿಸಬೇಕು. ಇದು ಸಾಮಾನ್ಯ ಚುನಾವಣೆಯಲ್ಲ ಎಂಬುದನ್ನು ಮರೆಬೇಡಿ. ಇದು ಸರ್ವಾಧಿಕಾರದ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸುವ ಚುನಾವಣೆ,” ಎಂದು ಖರ್ಗೆ ಪೋಸ್ಟ್ ಮಾಡಿದ್ದಾರೆ.
“ನಿಮ್ಮ ಮತವು ದೇಶದ 140 ಕೋಟಿ ನಾಗರಿಕರ ಜೀವನಗಳನ್ನು ಯುವ ನ್ಯಾಯ್, ಕಿಸಾನ್ ನ್ಯಾಯ್, ಶ್ರಮಿಕ್ ನ್ಯಾಯ್ ಮತ್ತು ಹಿಸ್ಸೇದಾರಿ ನ್ಯಾಯ್ ಮೂಲಕ ಬದಲಾಯಿಸಲಿ,” ಎಂದು ಖರ್ಗೆ ಹೇಳಿದ್ದಾರೆ.