ಧರ್ಮದ ಹೆಸರಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಲು ಬಿಜೆಪಿಗೆ ಬಿಡಬೇಡಿ: ಖರ್ಗೆ
ಡೆಹ್ರಾಡೂನ್ : ಪ್ರಧಾನಿ ನರೇಂದ್ರ ಮೋದಿ ಅವರು ಮಹಾವಿಷ್ಣುವಿನ 11ನೇ ಅವತಾರವಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವಿವಾರ ಹೇಳಿದ್ದಾರೆ.
ಇಲ್ಲಿನ ಬನ್ನು ಶಾಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಇಲ್ಲಿ ನಡೆದ ರ್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಜನರನ್ನು ಆಗ್ರಹಿಸಿದ ಖರ್ಗೆ, ಧರ್ಮದ ಹೆಸರಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಬಿಡಬಾರದು ಎಂದು ಹೇಳಿದರು.
ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ಪ್ರತಿ ಬಾರಿ ಟಿ.ವಿ. ಸ್ವಿಚ್ ಆನ್ ಮಾಡಿದಾಗ ಮೋದಿ ಅವರು ಕಂಡು ಬರುತ್ತಾರೆ. ಅವರು ಮಹಾವಿಷ್ಣುವಿನ 11ನೇ ಅವತಾರ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಆದರೆ, ಬಿಜೆಪಿ ನಾಯಕರು ಅಂತಹ ಯಾವುದೇ ಬಲಿದಾನ ಮಾಡಿಲ್ಲ ಎಂದು ಅವರು ಹೇಳಿದರು.
‘‘ದೇಶಕ್ಕಾಗಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಸ್ವಾತಂತ್ರ್ಯ ಪಡೆಯಲು ಮಹಾತ್ಮಾ ಗಾಂಧಿ ಹಾಗೂ ಜವಾಹರ್ಲಾಲ್ ನೆಹರೂ ಅವರು ಹಲವು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಬಿಜೆಪಿ ಏನು ಮಾಡಿದೆ’’ ಎಂದು ಖರ್ಗೆ ಪ್ರಶ್ನಿಸಿದರು.