ನನ್ನ ಕುರಿತು ನಕಲಿ ಫೇಸ್‌ಬುಕ್ ಪೋಸ್ಟ್‌ಗಳು, ವೆಬ್‌ಪೇಜ್‌ಗಳನ್ನು ನಂಬಬೇಡಿ: ಹಿರಿಯ ಪತ್ರಕರ್ತ ಕರಣ್ ಥಾಪರ್
ಹೊಸದಿಲ್ಲಿ: ಸುದ್ದಿ ಜಾಲತಾಣ The Wireಗಾಗಿ ಜನಪ್ರಿಯ ಸಂದರ್ಶನ ಕಾರ್ಯಕ್ರಮವನ್ನು ನಡೆಸುವ ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರು,ನಕಲಿ ವೆಬ್‌ಪೇಜ್‌ಗಳು ತನ್ನ ಕುರಿತು ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದು,ಅವುಗಳನ್ನು ನಂಬದಂತೆ ಹೇಳಿಕೆಯೊಂದರಲ್ಲಿ ಜನರನ್ನು ಆಗ್ರಹಿಸಿದ್ದಾರೆ.
‘BBC.INDIA ಮತ್ತು SUNTVಹೆಸರುಗಳನ್ನು ಬಳಸಿಕೊಂಡು ನನ್ನ ಕುರಿತು ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಷಯಗಳೊಂದಿಗೆ ನಕಲಿ ಮತ್ತು ಮೋಸದ ವೆಬ್‌ಪೇಜ್‌ಗಳು ಮತ್ತು ಫೇಸ್‌ಬುಕ್ ಪೋಸ್ಟ್‌ಗಳು ಹರಿದಾಡುತ್ತಿವೆ ಎನ್ನುವುದನ್ನು ನನ್ನ ಸ್ನೇಹಿತರು ಮತ್ತು ಹಿತೈಷಿಗಳು ನನ್ನ ಗಮನಕ್ಕೆ ತಂದಿದ್ದಾರೆ’ಎಂದು ಥಾಪರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ಫೊಟೇನ್‌ಮೆಂಟ್ ಟೆಲಿವಿಜನ್ ಪ್ರೈ.ಲಿ.ನ ಅಧ್ಯಕ್ಷರೂ ಆಗಿರುವ ಥಾಪರ್, ‘ವೆಬ್‌ಸೈಟ್‌ವೊಂದರಲ್ಲಿ ನನ್ನ ಸುಳ್ಳು ಸಂದರ್ಶನವೊಂದು ಪ್ರಸಾರಗೊಂಡಿದೆ. octequiti.com ನಲ್ಲಿಯ ಸದ್ರಿ ವೆಬ್ ಪುಟವು ನನ್ನ ಮತ್ತು ಸನ್‌ಟಿವಿಯ ನಿರೂಪಕಿ ಎನ್ನಲಾಗಿರುವ ಪುಜಿತಾ ದೇವರಾಜು ನಡುವಿನ ಸಂವಾದವನ್ನು ತೋರಿಸುತ್ತಿದೆ. ಅಲ್ಲಿ ಕ್ಲಿಕ್ ಬೈಟ್ ಅಡಿಬರಹದೊಂದಿಗೆ ಕಪಟ ಹಣ ಗಳಿಕೆ ಯೋಜನೆ ವೆಬ್‌ಸೈಟ್‌ನ್ನು ಪ್ರಚಾರ ಮಾಡಲಾಗುತ್ತಿದೆ ’ಎಂದು ಹೇಳಿದ್ದಾರೆ. ಈ ಪೋರ್ಟಲ್ ಅನ್ನು ಪ್ರಸ್ತುತ ನಿರ್ಬಂಧಿಸಲಾಗಿದೆ.
ವಿಷಯವು ಸಂಪೂರ್ಣ ಸುಳ್ಳು ಮತ್ತು ಕಪೋಲಕಲ್ಪಿತವಾಗಿದೆ. ‘ಜವಾಬ್ದಾರಿಯುತ ನಾಗರಿಕನಾಗಿ ನನ್ನ ಪ್ರತಿಕ್ರಿಯೆಯನ್ನು ನೀಡುವುದು ಹಾಗೂ ಈ ಸಂಬಂಧ ನಿಜವಾದ ಮತ್ತು ನಿಖರವಾದ ಅಂಶಗಳನ್ನು ಸಾರ್ವಜನಿಕರ ಮುಂದೆ ಮಂಡಿಸುವುದು ಅಗತ್ಯವಾಗಿದೆ ಎಂದು ನಾನು ಭಾವಿಸಿದ್ದೇನೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಷಯಗಳನ್ನು ನಾನು ನಿರಾಕರಿಸುತ್ತೇನೆ. ಅವುಗಳನ್ನು ನಂಬದಂತೆ ನಾನು ಸಾರ್ವಜನಿಕರನ್ನು ಒತ್ತಾಯಿಸುತ್ತೇನೆ ’ ಎಂದು ತಿಳಿಸಿರುವ ಥಾಪರ್, ತನ್ನದೆಂದು ಹೇಳಲಾಗಿರುವ ಸಂದರ್ಶನವನ್ನು ತಾನೆಂದೂ ನೀಡಿಯೇ ಇಲ್ಲ ಹಾಗೂ ಪೋಸ್ಟ್‌ಗಳಲ್ಲಿ ಮತ್ತು ವೆಬ್‌ಪುಟಗಳಲ್ಲಿ ಉಲ್ಲೇಖಿಸಿರುವ ಹೇಳಿಕೆಗಳು ತನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಈ ಬಗ್ಗೆ ನಾನು ಫೇಸ್‌ಬುಕ್‌ಗೆ ವರದಿ ಮಾಡಿದ್ದೇನೆ ಮತ್ತು ಪೋಲಿಸರಿಗೂ ದೂರು ಸಲ್ಲಿಸಿದ್ದೇನೆ. ಬಿಬಿಸಿ ಇಂಡಿಯಾ ಮತ್ತು ಸನ್‌ಟಿವಿ ಗಮನಕ್ಕೂ ಇದನ್ನು ತರಲಾಗಿದ್ದು,ವಿಷಯವನ್ನು ತೆಗೆದುಹಾಕುವಂತೆ ಮತ್ತು ತಕ್ಷಣ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದೇನೆ’ ಎಂದು ಥಾಪರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.