ಟಿಎಂಸಿಯೊಂದಿಗಿನ ಮೈತ್ರಿಗೆ ಈಗಲೂ ಬಾಗಿಲು ತೆರೆದಿದೆ: ಕಾಂಗ್ರೆಸ್

Update: 2024-03-03 05:59 GMT

ಮಮತಾ ಬ್ಯಾನರ್ಜಿ, ಜೈರಾಮ್ ರಮೇಶ್ | Photo: PTI 

ಗ್ವಾಲಿಯರ್: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 42 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದರೂ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯೊಂದಿಗಿನ ಮೈತ್ರಿಗೆ ಈಗಲೂ ಬಾಗಿಲು ತೆರೆದಿದೆ ಎಂದು ರವಿವಾರ ಕಾಂಗ್ರೆಸ್ ಹೇಳಿದೆ.

ಪಾಟ್ನಾದಲ್ಲಿ ವಿರೋಧ ಪಕ್ಷಗಳ ಬೃಹತ್ ಸಮಾವೇಶ ನಡೆಯುವುದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಮಾತನಾಡಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇನ್ನೂ ಇಂಡಿಯಾ ಮೈತ್ರಿಕೂಟದಲ್ಲಿದ್ದೇನೆ ಎಂದು ಹೇಳುತ್ತಿರುವಾಗ, ಅವರ ಪ್ರಾಧಾನ್ಯತೆ ಬಿಜೆಪಿಯನ್ನು ಸೋಲಿಸುವುದಾಗಿರುವುದರಿಂದ, ಈಗಲೂ ಮೈತ್ರಿಯ ಬಗ್ಗೆ ಆಶಾವಾದ ಮತ್ತು ನಂಬಿಕೆ ಇದೆ ಎಂದು ಹೇಳಿದ್ದಾರೆ. 

“ನಾವು ಮಮತಾ ಅವರ ಹೇಳಿಕೆಯ ಪ್ರಾಧಾನ್ಯತೆ ಹಾಗೂ ಉದ್ದೇಶವನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.

“ನಾವು ಯಾವುದೇ ಬಾಗಿಲುಗಳನ್ನು ಮುಚ್ಚಿಲ್ಲ. ಅವರು ಏಕಪಕ್ಷೀಯವಾಗಿ ತಾನು ಪಶ್ಚಿಮ ಬಂಗಾಳದ ಎಲ್ಲ 42 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಅದು ಅವರ ಪ್ರಕಟಣೆ. ನಮ್ಮ ಮಟ್ಟಿಗೆ ಹೇಳುವುದಾದರೆ, ಮಾತುಕತೆಗಳು ಮುಂದುವರಿದಿವೆ, ಬಾಗಿಲುಗಳು ತೆರೆದಿವೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬಿಹಾರ ರಾಜ್ಯದ ರಾಜಧಾನಿ ಪಾಟ್ನಾದಲ್ಲಿ ವಿರೋಧಿ ಪಕ್ಷಗಳ ಜಂಟಿ ಸಮಾವೇಶ ನಡೆಯಲಿದ್ದು, ಶನಿವಾರ ಪ್ರಧಾನಿ ಮೋದಿ ಅಲ್ಲಿಗೆ ಭೇಟಿ ನೀಡಿದ ನಂತರ ಈ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

“ಇದು ಮಹತ್ವದ ರಾಜಕೀಯ ಸಮಾವೇಶವಾಗಿದ್ದು, ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳನ್ನು ಸೋಲಿಸುವ ವಿರೋಧ ಪಕ್ಷಗಳ ಒಗ್ಗಟ್ಟನ್ನು ಪ್ರದರ್ಶಿಸಲಿದೆ” ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News