ಡಬಲ್ ಎಂಜಿನ್ ಸರಕಾರ ಎಂದರೆ ನಿರುದ್ಯೋಗಿಗಳಿಗೆ ‘‘ಡಬಲ್ ಹೊಡೆತ’’ : ರಾಹುಲ್ ಗಾಂಧಿ ವಾಗ್ದಾಳಿ

Update: 2024-02-18 16:12 GMT

ರಾಹುಲ್ ಗಾಂಧಿ

ಹೊಸದಿಲ್ಲಿ : ಉತ್ತರಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಕುರಿತಂತೆ ಬಿಜೆಪಿಯನ್ನು ರವಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡಬಲ್ ಎಂಜಿನ್ ಸರಕಾರ ಎಂದರೆ ನಿರುದ್ಯೋಗಿಗಳಿಗೆ ‘‘ಡಬಲ್ ಹೊಡೆತ’’ ಎಂದು ಹೇಳಿದ್ದಾರೆ.

‘ಎಕ್ಸ್’ನ ಹಿಂದಿ ಪೋಸ್ಟ್ ನಲ್ಲಿ ರಾಹುಲ್ ಗಾಂಧಿ, ಇಂದು ಉತ್ತರಪ್ರದೇಶದ ಪ್ರತಿ ಮೂರನೇ ಯುವಕ/ಯುವತಿ ನಿರುದ್ಯೋಗದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.

‘‘1.5 ಲಕ್ಷಕ್ಕಿಂತಲೂ ಅಧಿಕ ಸರಕಾರಿ ಹುದ್ದೆಗಳು ಖಾಲಿ ಇರುವಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಪಿಎಚ್ ಡಿ ಪಡೆದವರು ಕನಿಷ್ಠ ಅರ್ಹತೆ ಅಗತ್ಯ ಇರುವ ಹುದ್ದೆಗಳಿಗೆ ಕೂಡ ಸಾಲಿನಲ್ಲಿ ನಿಲ್ಲುತ್ತಿದ್ದಾರೆ’’ ಎಂದು ಹೇಳಿದರು.

‘‘ನೇಮಕಾತಿ ನಡೆಯುತ್ತಿದ್ದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತದೆ. ಪರೀಕ್ಷೆಗಳು ನಡೆದರೂ ಫಲಿತಾಂಶ ಬೇಗನೆ ಪ್ರಕಟವಾಗುವುದಿಲ್ಲ. ದೀರ್ಘ ಕಾಲದ ಬಳಿಕ ಫಲಿತಾಂಶ ಪ್ರಕಟವಾಗುತ್ತದೆ. ಹಗರಣದಿಂದಾಗಿ ಆಕಾಂಕ್ಷಿಗಳು ಆಗಾಗ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ’’ ಎಂದು ಅವರು ಹೇಳಿದರು.

ಸೇನೆ, ರೈಲ್ವೆ, ಪೊಲೀಸ್ ಮೊದಲಾದ ನೇಮಕಾತಿಗಾಗಿ ವರ್ಷಗಟ್ಟಲೆ ಕಾದು ಕುಳಿತಿರುವ ಲಕ್ಷಾಂತರ ವಿದ್ಯಾರ್ಥಿಗಳ ವಯೋಮಿತಿ ಮೀರಿದೆ. ಇದರಿಂದ ನೊಂದ ವಿದ್ಯಾರ್ಥಿ/ವಿದ್ಯಾರ್ಥಿನಿ ತನ್ನ ಬೇಡಿಕೆಗಳಿಗಾಗಿ ಬೀದಿಗಿಳಿದರೆ ಪೊಲೀಸರಿಂದ ಲಾಠಿ ಏಟು ತಿನ್ನಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ವಿದ್ಯಾರ್ಥಿಗಳಿಗೆ ಉದ್ಯೋಗ ಕೇವಲ ಆದಾಯದ ಮೂಲವಲ್ಲ. ಬದಲಾಗಿ ತನ್ನ ಕುಟುಂಬದ ಬದುಕನ್ನು ಬದಲಾಯಿಸುವ ಕನಸು ಕೂಡ ಆಗಿದೆ. ಈ ಕನಸುಗಳು ಭಗ್ನವಾಗುವುದರೊಂದಿಗೆ ಸಂಪೂರ್ಣ ಕುಟುಂಬದ ನಿರೀಕ್ಷೆಗಳು ಕೂಡ ಛಿದ್ರವಾಗುತ್ತದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನ ನೀತಿಗಳು ಯುವ ಜನತೆಯ ಕನಸುಗಳಿಗೆ ನ್ಯಾಯ ನೀಡಲಿದೆ. ನಾವು ಅವರ ಶ್ರಮ ವ್ಯರ್ಥವಾಗಲು ಬಿಡಲಾರೆವು ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News