ಹರ್ಯಾಣ ವಿಧಾನಸಭಾ ಚುನಾವಣೆ: ‘ಮತ ಬೇಕಿದ್ದರೆ ಈ ನೀರು ಕುಡಿಯಿರಿ’ ಎಂದು ಅಭ್ಯರ್ಥಿಗಳಿಗೆ ಸವಾಲು ಹಾಕಿದ ಗ್ರಾಮಸ್ಥರು

Update: 2024-10-03 09:59 GMT

Screengrab:X/@PTI_News

ಚಂಡೀಗಢ: ಹರ್ಯಾಣ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ನಿಮಗೆ ಮತ ಬೇಕಿದ್ದರೆ ಈ ನೀರು ಕುಡಿಯಿರಿ ಎಂದು ಅಭ್ಯರ್ಥಿಗಳಿಗೆ ಗ್ರಾಮಸ್ಥರು ಸವಾಲು ಹಾಕುತ್ತಿರುವ ಘಟನೆ ಚರ್ಕಿ ದಾದ್ರಿ ವಿಧಾನಸಭೆಯ ಸಮಸ್ಪುರ್ ನಲ್ಲಿ ನಡೆದಿದೆ.

ನಾಗರಿಕ ಸೌಲಭ್ಯಗಳು ಹಾಗೂ ಕೃಷಿ ಸಂಬಂಧಿತ ಸಮಸ್ಯೆಗಳು ಈ ಬಾರಿಯ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ.

ಸೋಮವಾರ ಮತ್ತು ಮಂಗಳವಾರ ರತಿಯ ಮತ್ತು ಹಿಸಾರ್ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ತುತ್ತಾದರು.

ಇದೇ ರೀತಿ ಚಕ್ರಿ ದಾದ್ರಾ ವಿಧಾನಸಭಾ ಕ್ಷೇತ್ರದ ಸಮಸ್ಪುರ್ ನಿವಾಸಿಗಳು ತಮ್ಮ ಗ್ರಾಮಕ್ಕೆ ಭೇಟಿ ನೀಡುವ ಅಭ್ಯರ್ಥಿಗಳಿಗೆ, “ನಿಮಗೆ ನಮ್ಮ ಮತ ಬೇಕಿದ್ದರೆ ಈ ನೀರು ಕುಡಿಯಿರಿ” ಎಂದು ಸವಾಲು ಒಡ್ಡುತ್ತಿದ್ದಾರೆ.

ನಮ್ಮ ಪ್ರದೇಶಕ್ಕೆ ಪೂರೈಸಲಾಗುತ್ತಿರುವ ನೀರು ಕೊಳಕಾಗಿದ್ದು, ದುರ್ವಾಸನೆಯನ್ನು ಹೊಂದಿದೆ. ಈ ನೀರನ್ನು ಪ್ರಾಣಿಗಳೂ ಕುಡಿಯಲು ಸಾಧ್ಯವಿಲ್ಲ. ಹೀಗಿದ್ದರೂ, ಹಲವಾರು ವರ್ಷಗಳಿಂದ ನಾವು ಇದೇ ನೀರನ್ನು ಕುಡಿಯಲು ಬಳಸುತ್ತಿದ್ದೇವೆ ಎಂದು ಸಮಸ್ಪುರ್ ಗ್ರಾಮಸ್ಥರು ಆರೋಪಿಸುತ್ತಾರೆ.

ಅಕ್ಟೋಬರ್ 5ರಂದು ಹರ್ಯಾಣ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News