ಅನಾವೃಷ್ಟಿ ಸ್ಥಿತಿ ಮತ್ತಷ್ಟು ಉಲ್ಬಣ: ಆಗಸ್ಟ್ ನಲ್ಲಿ ಕನಿಷ್ಠ ಮಳೆ ದಾಖಲೆ
ಹೊಸದಿಲ್ಲಿ: ದೇಶ ಹಿಂದೆಂದೂ ಕಂಡರಿಯದಂಥ ಅನಾವೃಷ್ಟಿ ಸ್ಥಿತಿ ನಿರ್ಮಾಣವಾಗಿದ್ದು, ಮಳೆ ದಾಖಲಿಸುವ ವ್ಯವಸ್ಥೆ ಆರಂಭವಾದ 1901ರಿಂದ ಇದೇ ಮೊದಲ ಬಾರಿಗೆ ಆಗಸ್ಟ್ನಲ್ಲಿ ಅತ್ಯಂತ ಕನಿಷ್ಠ ಮಳೆ ಬಿದ್ದಿದೆ. ದೇಶದಲ್ಲಿ ಮಳೆ ಅಭಾವ ಸ್ಥಿತಿ ಉಲ್ಬಣಗೊಂಡಿದ್ದು, ಆಗಸ್ಟ್ ಕೊನೆಯವರೆಗೆ ವಾಡಿಕೆ ಮಳೆಗಿಂತ ಶೇಕಡ 33ರಷ್ಟು ಕಡಿಮೆ ಮಳೆಯಾಗಿದೆ. ದೇಶದ ಬಹುತೇಕ ಕಡೆಗಳಲ್ಲಿ ಕಳೆದ 20 ದಿನಗಳಿಂದ ಮಳೆಯಾಗಿಲ್ಲ. ಪ್ರಸಕ್ತ ಮುಂಗಾರು (ಜೂನ್-ಸೆಪ್ಟೆಂಬರ್) ಮತ್ತಷ್ಟು ಅನಾವೃಷ್ಟಿಯೊಂದಿಗೆ ಕೊನೆಗೊಳ್ಳುವ ಭೀತಿ ಎದುರಾಗಿದೆ.
ಪ್ರಸಕ್ತ ಮುಂಗಾರಿನಲ್ಲಿ ಇದುವರೆಗೆ ದೇಶದಲ್ಲಿ ಸರಾಸರಿ 160.3 ಮಿಲಿಮೀಟರ್ ಮಳೆಯಾಗಿದೆ. ವಾಡಿಕೆಯಂತೆ ಆಗಸ್ಟ್ ಕೊನೆಯ ವೇಳೆಗೆ 241 ಮಿಲಿಮೀಟರ್ ಮಳೆಯಾಗಬೇಕಿದ್ದು, ಶೇಕಡ 33ರಷ್ಟು ಮಳೆ ಅಭಾವ ಸ್ಥಿತಿ ಇದೆ.
ದೇಶದ ಇತಿಹಾಸದಲ್ಲಿ ಆಗಸ್ಟ್ನಲ್ಲಿ ಇದುವರೆಗಿನ ಕನಿಷ್ಠ ಮಳೆ 2005ರಲ್ಲಿ ದಾಖಲಾಗಿತ್ತು. ಆ ವರ್ಷ 191.2 ಮಿಲಿಮೀಟರ್ ಮಳೆಯಾಗಿದ್ದು, ವಾಡಿಕೆಗಿಂತ ಶೇಕಡ 25ರಷ್ಟು ಕಡಿಮೆ ಮಳೆ ಬಿದ್ದಿತ್ತು. ಹಲವು ದಿನಗಳಿಂದ ಮಳೆ ವಿಶ್ರಾಂತಿ ನೀಡಿದ್ದು, ಒಟ್ಟಾರೆ ಮಳೆ ಪ್ರಮಾಣ 170-175 ಮಿಲಿಮೀಟರ್ ಮೀರುವ ಸಾಧ್ಯತೆ ಇಲ್ಲ. ಅಂದರೆ ಆಗಸ್ಟ್ ತಿಂಗಳ ಮಳೆ ಕೊರತೆ ಶೇಕಡ 30ರಷ್ಟು ಆಗಲಿದೆ.
ದುರ್ಬಲ ಮುಂಗಾರು ಸ್ಥಿತಿ ಒಂದು ತಿಂಗಳ ಅವಧಿಗೆ ವಿಸ್ತರಿಸಿದ್ದು, ದೇಶಾದ್ಯಂತ ಮಳೆ ಕೊರತೆ ಪ್ರಮಾಣ ಮಂಗಳವಾರ ಶೇಕಡ 9ಕ್ಕೇರಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳ ಮಳೆ ಪರಿಸ್ಥಿತಿ ಮಹತ್ವದ್ದು ಎನಿಸಲಿದೆ. ಹವಾಮಾನ ಅಂದಾಜಿನ ಪ್ರಕಾರ, ದೇಶದ ಕೆಲವೆಡೆಗಳಲ್ಲಿ ಮುಂದಿನ ಕೆಲ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ.
ಬಂಗಾಳಕೊಲ್ಲಿಯಲ್ಲಿ ಬಿರುಗಾಳಿ ಪ್ರಸರಣ ಸ್ಥಿತಿ ನಿರ್ಮಾಣವಾಗಲಿದ್ದು, ಸೆಪ್ಟೆಂಬರ್ 2ರ ಬಳಿಕ ಮತ್ತೆ ಮಳೆ ಆರಂಭವಾಗುವ ನಿರೀಕ್ಷೆ ಇದೆ. ಇದು ವಾಯುಭಾರ ಕುಸಿತಕ್ಕೆ ಕಾರಣವಾಗಲಿದ್ದು, ಪೂರ್ವ, ಕೇಂಧ್ರ ಹಾಗೂ ದಕ್ಷಿಣ ಭಾರತದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುಖ್ಯಸ್ಥ ಮೃತ್ಯುಂಜಯ ಮಹೋಪಾತ್ರ ಹೇಳಿದ್ದಾರೆ.