ಶೇ.0.04ರಷ್ಟಿರುವ ಕುಬೇರರ ಮೇಲೆ ಸಂಪತ್ತು ತೆರಿಗೆಯ ಮೂಲಕ ಭಾರತದಲ್ಲಿ ಆರ್ಥಿಕ ಅಸಮಾನತೆಯನ್ನು ನಿವಾರಿಸಬಹುದು: ವರದಿ

Update: 2024-05-24 11:02 GMT

ಸಾಂದರ್ಭಿಕ ಚಿತ್ರ | PC : NDTV 

ಹೊಸದಿಲ್ಲಿ: ಭಾರತದಲ್ಲಿ ಹೆಚ್ಚುತ್ತಿರುವ ಆದಾಯ ಮತ್ತು ಸಂಪತ್ತು ಅಸಮಾನತೆಯನ್ನು ಅತ್ಯಂತ ಶ್ರೀಮಂತರಿಗೆ ಸಮಗ್ರ ಮತ್ತು ಪ್ರಗತಿಪರ ಸಂಪತ್ತು ತೆರಿಗೆಯನ್ನು ವಿಧಿಸುವ ಮೂಲಕ ನಿವಾರಿಸಬಹುದು ಎಂದು World Inequality Lab (ಡಬ್ಲ್ಯುಐಎಲ್) ಶುಕ್ರವಾರ ಪ್ರಕಟಿಸಿರುವ ವರದಿಯು ಸಲಹೆ ನೀಡಿದೆ.

ವರದಿಯು ಮಾ.19ರಂದು ಪ್ರಕಟಗೊಂಡಿದ್ದ ಡಬ್ಲ್ಯುಐಎಲ್‌ನ ‘ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ,1922-2023: ಬಿಲಿಯನೇರ್ ರಾಜ್‌ನ ಉಚ್ಛ್ರಾಯ’ ಅಧ್ಯಯನದ ಅನುಸರಣೆಯಾಗಿದೆ. ಅರ್ಥಶಾಸ್ತ್ರಜ್ಞರಾದ ನಿತಿನ್ ಕುಮಾರ್ ಭಾರ್ತಿ,‌ ಲುಕಾಸ್ ಚಾನ್ಸೆಲ್, ಥಾಮಸ್ ಪಿಕೆಟಿ ಮತ್ತು ಅನ್ಮೋಲ್ ಸೋಮಾಂಚಿ ಅವರು ಬರೆದಿದ್ದ ಅಧ್ಯಯನ ವರದಿಯು ಭಾರತದ ಜನಸಂಖ್ಯೆಯ ಶೇ.1ರಷ್ಟು ಅತ್ಯಂತ ಶ್ರೀಮಂತರ ಆದಾಯ ಮತ್ತು ಸಂಪತ್ತಿನ ಪಾಲು ದೇಶದ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ ಎನ್ನುವುದನ್ನು ತೋರಿಸಿತ್ತು.

ಭಾರತದ ಜನಸಂಖ್ಯೆಯ ಶೇ.1ರಷ್ಟು ಅತ್ಯಂತ ಶ್ರೀಮಂತರು 2022-23ರಲ್ಲಿ ದೇಶದ ಆದಾಯದ ಶೇ.22.6 ಮತ್ತು ಸಂಪತ್ತಿನ ಶೇ.40.1ರಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂದು ಹೇಳಿದ್ದ ಅಧ್ಯಯನವು, 2014-15 ಮತ್ತು 2022-23ರ ನಡುವೆ ಉನ್ನತ ಮಟ್ಟದ ಅಸಮಾನತೆಯ ಏರಿಕೆಯು ಸಂಪತ್ತಿನ ಕೇಂದ್ರೀಕರಣದ ವಿಷಯದಲ್ಲಿ ಎದ್ದು ಕಾಣುತ್ತಿದೆ ಎಂದು ಬೆಟ್ಟು ಮಾಡಿತ್ತು.

ತಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದ ಅಂಶಗಳನ್ನು ಆಧರಿಸಿ ಅದೇ ಲೇಖಕರು ಈಗ ತಮ್ಮ ನೂತನ ವರದಿಯಲ್ಲಿ ‘ಕೋಟ್ಯಧಿಪತಿ ತೆರಿಗೆ’ಯನ್ನು ಪ್ರಸ್ತಾವಿಸಿದ್ದಾರೆ. 2022-23ರಲ್ಲಿ 10 ಕೋಟಿ ರೂ.ಗೂ ಹೆಚ್ಚಿನ ನಿವ್ವಳ ಸಂಪತ್ತನ್ನು ಹೊಂದಿದವರಿಗೆ ಮಾತ್ರ ಈ ತೆರಿಗೆಯನ್ನು ವಿಧಿಸುವಂತೆಯೂ ಅವರು ಪ್ರಸ್ತಾವಿಸಿದ್ದಾರೆ.

ನಮ್ಮ ಇತ್ತೀಚಿನ ಅಂದಾಜುಗಳಂತೆ ಕೇವಲ ಶೇ.0.04ರಷ್ಟು ವಯಸ್ಕರು ಮಾತ್ರ ಈ ಗುಂಪಿಗೆ ಸೇರುತ್ತಾರೆ ಎಂದು ವರದಿಯು ತಿಳಿಸಿದೆ.

ಲೇಖಕರು ತೆರಿಗೆ ಪ್ಯಾಕೇಜಿನ ಮೂರು ಪರ್ಯಾಯ ರೂಪಗಳನ್ನು ಪ್ರಸ್ತಾವಿಸಿದ್ದಾರೆ.

1: 10 ಕೋಟಿರೂ.ಗೂ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿರುವ ವ್ಯಕ್ತಿಗಳಿಗೆ ಶೇ.2ರಷ್ಟು ವಾರ್ಷಿಕ ತೆರಿಗೆ ಮತ್ತು 10 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಗಳ ಮೇಲೆ ಶೇ.33ರಷ್ಟು ಪಿತ್ರಾರ್ಜಿತ ತೆರಿಗೆಯನ್ನು ವಿಧಿಸುವುದನ್ನು ಪ್ರಸ್ತಾವಿಸಲಾಗಿದೆ. ನಮ್ಮ ಅಂದಾಜಿನಂತೆ ಇದೊಂದೇ ಜಿಡಿಪಿಯ ಶೇ.2.7ರಷ್ಟು ಆದಾಯವನ್ನು ಸೃಷ್ಟಿಸುತ್ತದೆ ಎಂದು ವರದಿಯು ಹೇಳಿದೆ.

2: 100 ಕೋಟಿ ರೂ.ಗೂ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿರುವ ವ್ಯಕ್ತಿಗಳಿಗೆ ತೆರಿಗೆ ಶೇ.4ಕ್ಕೆ ಏರಿಕೆ ಮತ್ತು 10 ಕೋಟಿ ರೂ.ಗಳಿಂದ 100 ಕೋಟಿ ರೂ.ವರೆಗಿನ ಮೌಲ್ಯದ ಆಸ್ತಿಗಳ ಮೇಲೆ ಶೇ.33ರಷ್ಟು ಪಿತ್ರಾರ್ಜಿತ ತೆರಿಗೆಯನ್ನು ಪ್ರಸ್ತಾವಿಸಲಾಗಿದೆ. 100 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಗಳಿಗೆ ಪಿತ್ರಾರ್ಜಿತ ತೆರಿಗೆಯನ್ನು ಶೇ.45ಕ್ಕೆ ಹೆಚ್ಚಿಸಲು ಪ್ರಸ್ತಾವಿಸಲಾಗಿದೆ. ವರದಿಯ ಪ್ರಕಾರ ಈ ತೆರಿಗೆಯಿಂದ ಆದಾಯವು ಭಾರತದ ಜಿಡಿಪಿಯ ಶೇ.4.6ರಷ್ಟಾಗುತ್ತದೆ.

3: ಇಲ್ಲಿ ಸಂಪತ್ತಿನ ಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ,ಆದರೆ ಸಂಪತ್ತು ತೆರಿಗೆಯನ್ನು ಶೇ.3ರಿಂದ ಶೇ.5ರವರೆಗೆ ಮತ್ತು ಪಿತ್ರಾರ್ಜಿತ ತೆರಿಗೆಯನ್ನು ಶೇ.45ರಿಂದ ಶೇ.55ರವರೆಗೆ ಹೆಚ್ಚಿಸುವುದನ್ನು ಪ್ರಸ್ತಾವಿಸಲಾಗಿದೆ. ಇದರಿಂದ ತೆರಿಗೆ ಆದಾಯವು ಜಿಡಿಪಿಯ ಶೇ.6.1ಕ್ಕೆ ಹೆಚ್ಚಬಹುದು ಎಂದು ಲೇಖಕರು ವರದಿಯಲ್ಲಿ ಹೇಳಿದ್ದಾರೆ.

ಹೀಗೆ ಉತ್ಪತ್ತಿಯಾಗುವ ಆದಾಯವನ್ನು ಬಡವರಿಗೆ ನೇರ ನಗದು ವರ್ಗಾವಣೆ ಮತ್ತು ಆರೋಗ್ಯ,ಶಿಕ್ಷಣ ಹಾಗೂ ಇತರ ಸಾಮಾಜಿಕ ಕ್ಷೇತ್ರಗಳಂತಹ ‘ಮರು-ವಿತರಣಾ ನೀತಿ’ಗಳಲ್ಲಿ ಹೂಡಿಕೆ ಮಾಡಬಹುದು ಎಂದು ವರದಿಯು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News