ವೈದ್ಯಕೀಯ ಜಾಮೀನಿಗಾಗಿ ಅರವಿಂದ ಕೇಜ್ರಿವಾಲ್ ಸಕ್ಕರೆ ಅಂಶವಿರುವ ಆಹಾರ ಸೇವಿಸುತ್ತಿದ್ದಾರೆ: ಈಡಿ
ಹೊಸದಿಲ್ಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯುವ ಉದ್ದೇಶದಿಂದ ಟೈಪ್-2 ಡಯಾಬಿಟಿಸ್ ಹೊಂದಿದ್ದರೂ ಪ್ರತಿದಿನ ಮಾವಿನ ಹಣ್ಣು ಹಾಗೂ ಸಿಹಿ ತಿಂಡಿಗಳಂತಹ ಅತ್ಯಧಿಕೆ ಸಕ್ಕರೆಯ ಅಂಶಗಳಿರುವ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಈ.ಡಿ.) ಗುರುವಾರ ಇಲ್ಲಿನ ನ್ಯಾಯಾಲಯಕ್ಕೆ ತಿಳಿಸಿದೆ.
ಸಿಬಿಐ ಹಾಗೂ ಈ.ಡಿ. ಪ್ರಕರಣಗಳಿಗಿರುವ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಜಾರಿ ನಿರ್ದೇಶನಾಲಯ ಈ ವಾದ ಮಂಡಿಸಿತು. ವಾದವನ್ನು ಆಲಿಸಿದ ನ್ಯಾಯಾಧೀಶರು, ಕೇಜ್ರಿವಾಲ್ ಅವರ ಡಯಟ್ ಚಾರ್ಟ್ ಸೇರಿದಂತೆ ಈ ವಿಷಯದ ಕುರಿತ ವರದಿಯನ್ನು ಸಲ್ಲಿಸುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಕ್ಕರೆಯ ಮಟ್ಟ ಏರು ಪೇರಾಗುತ್ತಿರುವುದರಿಂದ ತನ್ನ ವೈದ್ಯರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ನಿಯಮಿತವಾಗಿ ಸಮಾಲೋಚನೆ ನಡೆಸಲು ಅನುಮತಿ ನೀಡುವಂತೆ ಕೋರಿ ಕೇಜ್ರಿವಾಲ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ಶುಕ್ರವಾರದ ಒಳಗೆ ವರದಿ ಸಲ್ಲಿಸುವಂತೆ ನ್ಯಾಯಾಧೀಶರು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು. ಈ ಪ್ರಕರಣವನ್ನು ನ್ಯಾಯಾಲಯ ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
‘‘ಟೈಪ್-2 ಡಯಾಬಿಟಿಸ್ ಇರುವ ಹೊರತಾಗಿಯೂ ಅರವಿಂದ ಕೇಜ್ರಿವಾಲ್ ಅವರು ಅತ್ಯಧಿಕ ಸಕ್ಕರೆಯ ಅಂಶವಿರುವ ಆಹಾರಗಳನ್ನು ಸೇವಿಸುತ್ತಿದ್ದಾರೆ. ಅವರು ಆಲು ಪೂರಿ, ಮಾವಿನ ಹಣ್ಣು, ಸಿಹಿ ತಿಂಡಿಯನ್ನು ದಿನನಿತ್ಯ ಸೇವಿಸುತ್ತಿದ್ದಾರೆ. ವೈದ್ಯಕೀಯ ಜಾಮೀನು ಪಡೆಯುವ ಉದ್ದೇಶದಿಂದ ಅವರು ಅತ್ಯಧಿಕ ಸಕ್ಕರೆಯ ಅಂಶವಿರುವ ಆಹಾರವನ್ನು ಸೇವಿಸುತ್ತಿದ್ದಾರೆ’’ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿದೆ.