ರಾಜಸ್ಥಾನ | 2022ರ ಹಿರಿಯ ಶಿಕ್ಷಕರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಈಡಿಯಿಂದ ಒಂಬತ್ತನೆಯ ಬಂಧನ
ಹೊಸದಿಲ್ಲಿ: 2022ರಲ್ಲಿ ರಾಜಸ್ಥಾನದಲ್ಲಿ ನಡೆದಿದ್ದ ಹಿರಿಯ ಶಿಕ್ಷಕರ ದರ್ಜೆಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಒಂಬತ್ತನೆ ಬಂಧನ ಮಾಡಲಾಗಿದೆ ಎಂದು ಗುರುವಾರ ಜಾರಿ ನಿರ್ದೇಶನಾಲಯ(ಈಡಿ) ತಿಳಿಸಿದೆ.
ಅನಿತಾ ಕುಮಾರಿ ಅಲಿಯಾಸ್ ಅನಿತಾ ಮೀನಾ ಎಂಬ ಆರೋಪಿಯನ್ನು ಬುಧವಾರ ವಶಕ್ಕೆ ಪಡೆಯಲಾಗಿದ್ದು, ಜೈಪುರದಲ್ಲಿನ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನ್ಯಾಯಾಲಯದೆದುರು ಹಾಜರುಪಡಿಸಲಾಯಿತು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ನ್ಯಾಯಾಲಯವು ಆಕೆಯನ್ನು ಎರಡು ದಿನಗಳ ಕಾಲ ಜಾರಿ ನಿರ್ದೇಶನಾಲಯ(ಈಡಿ)ದ ವಶಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.
ರಾಜಸ್ಥಾನ ಪೊಲೀಸರು ಮಾಜಿ ರಾಜಸ್ಥಾನ ನಾಗರಿಕ ಸೇವಾ ಆಯೋಗದ ಸದಸ್ಯ ಬಾಬುಲಾಲ್ ಕಟಾರಾ, ಅನಿಲ್ ಕುಮಾರ್ ಮೀನಾ ಅಲಿಯಾಸ್ ಶೇರ್ ಸಿಂಗ್ ಮೀನಾ ವಿರುದ್ಧ ದಾಖಲಿಸಿಕೊಂಡಿರುವ ಪ್ರಾಥಮಿಕ ಮಾಹಿತಿ ವರದಿಯನ್ನು ಆಧರಿಸಿ, ಅಕ್ರಮ ಹಣ ವರ್ಗಾವಣೆ ತನಿಖೆ ನಡೆಯುತ್ತಿದೆ.
ಜಾರಿ ನಿರ್ದೇಶನಾಲಯ(ಈಡಿ)ದ ಪ್ರಕಟಣೆಯ ಪ್ರಕಾರ, ಇದಕ್ಕೂ ಮುನ್ನ, ಜಾರಿ ನಿರ್ದೇಶನಾಲಯ(ಈಡಿ)ವು ಕಟಾರಾ, ಅನಿಲ್ ಕುಮಾರ್ ಮೀನಾ ಹಾಗೂ ಇನ್ನಿತರ ಆರು ಮಂದಿಯನ್ನು ಬಂಧಿಸಿತ್ತು.
ಇನ್ನಿತರ ಆರೋಪಿಗಳೊಂದಿಗೆ ಸಂಚು ನಡೆಸಿದ್ದ ಅನಿಲ್ ಕುಮಾರ್ ಮೀನಾ, 2022ರ ಹಿರಿಯ ಶಿಕ್ಷಕರ 2ನೇ ದರ್ಜೆಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದರು ಹಾಗೂ ಭಾರಿ ಪ್ರಮಾಣದ ಲಂಚಕ್ಕೆ ಪ್ರತಿಯಾಗಿ ಆ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾರ್ಥಿಗಳಿಗೆ ಪೂರೈಸಿದ್ದರು ಎಂದು ಜಾರಿ ನಿರ್ದೇಶನಾಲಯ(ಈಡಿ) ಆರೋಪಿಸಿದೆ.
ಅನಿಲ್ ಕುಮಾರ್ ಮೀನಾ ಅವರ ಆಪ್ತ ಗೆಳತಿಯಾಗಿದ್ದ ಅನಿತಾ ಮೀನಾ, ಈ ಅಪರಾಧ ಕೃತ್ಯದ ಪ್ರಕ್ರಿಯೆಯಲ್ಲಿ ಅನಿಲ್ ಕುಮಾರ್ ಮೀನಾಗೆ ನೆರವು ನೀಡಿದ್ದರು ಹಾಗೂ ಅದಕ್ಕಾಗಿ ಅವರಿಂದ ಭಾರಿ ಪ್ರಮಾಣದ ನಗದನ್ನೂ ಪಡೆದಿದ್ದರು ಎಂದೂ ಪ್ರಕಟಣೆಯಲ್ಲಿ ಆರೋಪಿಸಲಾಗಿದೆ.
ಆ ನಗದನ್ನು ಬಳಸಿಕೊಂಡು ಆಕೆ ಸ್ಥಿರಾಸ್ಥಿಯನ್ನೂ ಖರೀದಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಕಳೆದ ವರ್ಷದ ಜೂನ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಎರಡು ಬಾರಿ ಶೋಧ ಕಾರ್ಯಾಚರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ(ಈಡಿ)ವು, ಭೂಪೇಂದ್ರ ಸರಣ್, ಸುರೇಶ್ ಕುಮಾರ್ ಅಲಿಯಾಸ್ ಸುರೇಶ್ ಸಾವು, ವಿಜಯ್ ದಾಮೋರೆ, ಪೀರಾರಾಮ್, ಪುಖ್ ರಾಜ್ ಹಾಗೂ ಅರುಣ್ ಶರ್ಮ ಸೇರಿದಂತೆ ಎಂಟು ಮಂದಿಯನ್ನು ಆರೋಪಿಗಳೆಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಿತ್ತು.