“ಬಿಜೆಪಿ ನಾಯಕರ ವಿಭಜನವಾದಿ’’ ಭಾಷಣಗಳ ಬಗ್ಗೆ ಚುನಾವಣಾ ಆಯೋಗ ಕುರುಡಾಗಿದೆ” | ಚುನಾವಣಾ ಆಯೋಗದ ನೋಟಿಸ್‌ಗೆ ಖರ್ಗೆ ಉತ್ತರ
ಹೊಸದಿಲ್ಲಿ : ‘‘ವಿಭಜನವಾದಿ’’ ಮತ್ತು ‘‘ಕೋಮು’’ ಭಾಷಣಗಳನ್ನು ಮಾಡಿರುವುದಕ್ಕಾಗಿ ಬಿಜೆಪಿ ನಾಯಕರ ವಿರುದ್ಧ ದೂರುಗಳು ದಾಖಲಾದರೆ, ಅದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂಬ ಅಭಿಪ್ರಾಯವನ್ನು ಚುನಾವಣಾ ಆಯೋಗವು ಹೆಚ್ಚಿನ ಸಂದರ್ಭಗಳಲ್ಲಿ ವ್ಯಕ್ತಪಡಿಸುತ್ತದೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷರು ಈ ಆರೋಪವನ್ನು ಮಾಡಿದ್ದಾರೆ. ಬಿಜೆಪಿ ಸಲ್ಲಿಸಿದ ದೂರಿನ ಆಧಾರದಲ್ಲಿ ಎಪ್ರಿಲ್ 25ರಂದು ಚುನಾವಣಾ ಆಯೋಗವು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ನೋಟಿಸ್‌ಗೆ ನೀಡಿದ ಉತ್ತರದಲ್ಲಿ ಖರ್ಗೆ ಈ ಅಸಮಾಧಾನವನ್ನು ಹೊರಗೆಡವಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶವನ್ನು ಭಾಷೆ ಮತ್ತು ಪ್ರಾದೇಶಿಕತೆ ಆಧಾರದಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯು ತನ್ನ ದೂರಿನಲ್ಲಿ ಆರೋಪಿಸಿತ್ತು.
‘‘ನನ್ನ ಪಕ್ಷ ಮಾದರಿ ನೀತಿ ಸಂಹಿತೆಯನ್ನು ಪಾಲಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ‘‘ಪ್ರಚೋದನಾತ್ಮಕ ಮತ್ತು ವಿಭಜನಾತ್ಮಕ’’ ಹೇಳಿಕೆಗಳನ್ನು ನೀಡುತ್ತಿರುವುದನ್ನು ಈಗಲೂ ನಿಲ್ಲಿಸಿಲ್ಲ’’ ಎಂದು ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರು ಮುಸ್ಲಿಮರ ಬಗ್ಗೆ ‘‘ದ್ವೇಷದ ಮಾತುಗಳನ್ನು ಆಡುತ್ತಾ’’ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಖರ್ಗೆ ಹೇಳಿದರು. ‘‘ನಾನು ಮತ್ತು ರಾಹುಲ್ ಗಾಂಧಿ ಆಡಿರುವ ಮಾತುಗಳು ಮೋದಿ ಮತ್ತು ಇತರ ಬಿಜೆಪಿ ನಾಯಕರ ಮಾತುಗಳ ಧ್ವನಿ, ಉದ್ದೇಶ ಮತ್ತು ಭಾಷೆಯ ಸನಿಹಕ್ಕೂ ಬರುವುದಿಲ್ಲ. ಹಾಗಾಗಿ, ಅವುಗಳನ್ನು ಚುನಾವಣಾ ಕಾನೂನುಗಳ ಉಲ್ಲಂಘನೆ ಎಂಬುದಾಗಿ ಪರಿಗಣಿಸಬಾರದು’’ ಎಂದು ಖರ್ಗೆ ತನ್ನ ಉತ್ತರದಲ್ಲಿ ಹೇಳಿದ್ದಾರೆ.