ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳ ಎತ್ತಂಗಡಿ, ಪಶ್ಚಿಮ ಬಂಗಾಳ ಡಿಜಿಪಿಯನ್ನು ವರ್ಗಾವಣೆಗೊಳಿಸಿದ ಚುನಾವಣಾ ಆಯೋಗ
ಹೊಸದಿಲ್ಲಿ: ಗುಜರಾತ್, ಬಿಹಾರ ಮತ್ತು ಉತ್ತರ ಪ್ರದೇಶದ ಹಿರಿಯ ಅಧಿಕಾರಿಗಳು ಸೇರಿದಂತೆ ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ಕೈಬಿಟ್ಟು ಚುನಾವಣಾ ಆಯೋಗ ಇಂದು ಮಹತ್ವದ ಆದೇಶ ಹೊರಡಿಸಿದೆ.
ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕರನ್ನೂ ಚುನಾವಣಾ ಆಯೋಗ ವರ್ಗಾಯಿಸಿದೆ. ಈ ಹುದ್ದೆಗೆ ಸಂಭಾವ್ಯ ಮೂರು ಆಯ್ಕೆಗಳನ್ನು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕೆಂದು ಆಯೋಗ ಸೂಚಿಸಿದೆ.
ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಗೃಹ ಕಾರ್ಯದರ್ಶಿಗಳು ಹಾಗೂ ಮಿಜೋರಾಂ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಕೆಲ ಹಿರಿಯ ಅಧಿಕಾರಿಗಳನ್ನೂ ವರ್ಗಾಯಿಸಲಾಗಿದೆ.
ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಸಹಿತ ಮಹಾರಾಷ್ಟ್ರದಾದ್ಯಂತ ಮುನಿಸಿಪಾಲಿಟಿಗಳ ಇತರ ಅಧಿಕಾರಿಗಳನ್ನೂ ಕೈಬಿಡಲಾಗಿದೆ.
ಲೋಕಸಭಾ ಚುನಾವಣೆಗೆ ಮುನ್ನ ಚನಾವಣಾ ಆಯೋಗ ಕೈಗೊಂಡ ಮೊದಲ ಪ್ರಮುಖ ಕ್ರಮ ಇದಾಗಿದೆ.
ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಹಾಗೂ ನೂತನವಾಗಿ ನೇಮಕಗೊಂಡ ಇತರ ಇಬ್ಬರು ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರ ನಡುವೆ ನಡೆದ ಸಭೆಯ ನಂತರ ಈ ಕ್ರಮಕೈಗೊಳ್ಳಲಾಗಿದೆ.