ಉಪಚುನಾವಣೆ ದಿನಾಂಕ ಪರಿಷ್ಕರಣೆ | ಕೇರಳ, ಪಂಜಾಬ್, ಉತ್ತರ ಪ್ರದೇಶದಲ್ಲಿ ನವೆಂಬರ್ 20ರಂದು ಮತದಾನ
ಹೊಸದಿಲ್ಲಿ : ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಸೋಮವಾರ ಪರಿಷ್ಕರಣೆ ಮಾಡಲಾಗಿದೆ. ನೂತನ ವೇಳಾಪಟ್ಟಿಯಂತೆ ನವೆಂಬರ್ 20 ಕ್ಕೆ ಚುನಾವಣೆ ನಡೆಯಲಿದೆ.
ಆರಂಭದಲ್ಲಿ ಉಪಚುನಾವಣೆಗಳನ್ನು ನವೆಂಬರ್ 13 ರಂದು ಘೋಷಿಸಲಾಗಿತ್ತು. ಆದರೆ ಬಿಜೆಪಿ, ಕಾಂಗ್ರೆಸ್, ಬಿ ಎಸ್ ಪಿ ಮತ್ತು ಆರ್ ಎಲ್ ಡಿ ಪಕ್ಷಗಳ ಕೋರಿಕೆಯ ಮೇಲೆ ದಿನಾಂಕ ಬದಲಾಯಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನವೆಂಬರ್ 13 ರಂದು ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಿಗದಿಯಾಗಿದೆ ಎಂದು ಪಕ್ಷಗಳು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದವು.
ಪರಿಷ್ಕೃತ ವೇಳಾಪಟ್ಟಿಯಂತೆ ಕೇರಳದ ಪಾಲಕ್ಕಾಡ್, ಪಂಜಾಬ್ ನ ಡೇರಾ ಬಾಬಾ ನಾನಕ್, ಚಬ್ಬರ್ವಾಲ್, ಗಿಡ್ಡರ್ಬಾಹಾ ಮತ್ತು ಬರ್ನಾಲಾ ಮತ್ತು ಉತ್ತರ ಪ್ರದೇಶದ ಮೀರಾಪುರ್, ಕುಂದರ್ಕಿ, ಗಾಝಿಯಾಬಾದ್, ಖೈರ್, ಕರ್ಹಾಲ್, ಸಿಶಾಮೌ, ಫುಲ್ಪುರ್, ಕತೇಹಾರಿ, ಮತ್ತು ಮಜವಾನ್ ಕ್ಷೇತ್ರಗಳಿಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದೆ..