ಚುನಾವಣಾ ಬಾಂಡ್ ಮೂಲಕ ಭ್ರಷ್ಟಾಚಾರ ಕಾನೂನುಬದ್ಧಗೊಳಿಸಿದ ಕೇಂದ್ರ ಸರಕಾರ: ಕಾಂಗ್ರೆಸ್ ವಾಗ್ದಾಳಿ
ಹೊಸದಿಲ್ಲಿ : ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷವು ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದ್ದು ಈ ‘ಪಾರದರ್ಶಕ’ ಯೋಜನೆಯ ಮೂಲಕ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ಹಾಗೂ ದಾಳಿ ಬಳಿಕದ ಲಂಚಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಪಾವತಿಸಬಹುದಾಗಿದೆ ಎಂದು ವ್ಯಂಗ್ಯವಾಡಿದೆ.
ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿ ತನಿಖೆಯಾಗಬೇಕೆಂಬ ತನ್ನ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷವು ಪುನರುಚ್ಚರಿಸಿದೆ.
ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ , ‘‘ ಕಪ್ಪುಹಣವನ್ನು ವಾಪಸ್ ತರುವುದಾಗಿ ಪ್ರಧಾನಿಯವರು ಖಾತರಿ ನೀಡಿದ್ದರು. ಅದಕ್ಕೆ ಬದಲು ಅವರು ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿದರು. ಈಗ ಅವರು ಅದನ್ನು ಹತಾಶೆಯಿಂದ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದರು.
ಚುನಾವಣಾ ಬಾಂಡ್ ಹಗರಣದಲ್ಲಿ ‘ಪ್ರಿಪೇಯ್ಡ್ ಲಂಚ, ಪೋಸ್ಟ್ ಪೇಯ್ಡ್ ಲಂಚ, ಹಫ್ತಾ ವಸೂಲಿ ಹಾಗೂ ಬೇನಾಮಿ ಕಂಪೆನಿಗಳು, ಹೀಗೆ ನಾಲ್ಕು ನಮೂನೆಗಳಲ್ಲಿ ರಾಜಾರೋಷವಾಗಿ ಭ್ರಷ್ಟಾಚಾರವನ್ನು ಎಸಗಲಾಗುತ್ತದೆʼ ಎಂದು ರಮೇಶ್ ಆಪಾದಿಸಿದರು.
ಕೇಂದ್ರ ಸರಕಾರ ಹಾಗೂ ಬಿಜೆಪಿ ಆಳ್ವಿಕೆಯ ರಾಜ್ಯ ಸರಕಾರಗಳಿಂದ 179 ಪ್ರಮುಖ ಗುತ್ತಿಗೆಗಳು ಹಾಗೂ ಯೋಜನಾ ಅನುಮೋದನೆಗಳನ್ನು ಪಡೆದ 38 ಕಾರ್ಪೋರೇಟ್ ಸಂಸ್ಥೆಗಳು 2004 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ ಗಳನ್ನು ದೇಣಿಗೆ ನೀಡಿವೆ. ಇದಕ್ಕೆ ಪ್ರತಿಫಲವಾಗಿ ಈ ಕಂಪೆನಿಗಳಿಗೆ 3.8 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳು ಹಾಗೂ ಗುತ್ತಿಗೆಗಳಿಗೆ ಅನುಮೋದನೆ ದೊರೆತಿದೆ ಎಂದವರು ಆಪಾದಿಸಿದ್ದಾರೆ.