RTI ಅರ್ಜಿ: ಚುನಾವಣಾ ಬಾಂಡ್ ಕೇಸ್‌ನಲ್ಲಿ SBI ಅನ್ನು ಪ್ರತಿನಿಧಿಸಿದ್ದ ವಕೀಲ ಹರೀಶ್ ಸಾಳ್ವೆಗೆ ನೀಡಲಾದ ಶುಲ್ಕದ ವಿವರ ನೀಡಲು ನಿರಾಕರಿಸಿದ ಬ್ಯಾಂಕ್
ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಕೀಲರಾಗಿದ್ದ ಹರೀಶ್ ಸಾಳ್ವೆಗೆ ಪಾವತಿಸಲಾಗಿರುವ ಶುಲ್ಕದ ವಿವರ ನೀಡಲು ಬ್ಯಾಂಕ್ ನಿರಾಕರಿಸಿದೆ.
ಶುಲ್ಕದ ವಿವರ ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ಅಜಯ್ ಬೋಸ್ ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ ಎಸ್‌ಬಿಐ, ಕೋರಿದ ವಿವರಗಳನ್ನು ಆರ್‌ಟಿಐ ಕಾಯ್ದೆಯಡಿ ಸಾರ್ವಜನಿಕಗೊಳಿಸುವುದರಿಂದ ವಿನಾಯಿತಿ ಇದೆ ಎಂದು ಹೇಳಿದೆ.
ವಕೀಲರಿಗೆ ಪಾವತಿಸಿದ ಶುಲ್ಕವು ತೆರಿಗೆದಾರರ ಹಣ ಎಂದು ಅಜಯ್ ಬೋಸ್ ಪ್ರತಿಪಾದಿಸಿದ್ದು, ಎಸ್‌ಬಿಐ ಈ ಮಾಹಿತಿಯನ್ನು ಏಕೆ ಮರೆಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಕೋರಿದ ವಿವರಗಳು, ಬ್ಯಾಂಕ್ ನಲ್ಲಿ ವಾಣಿಜ್ಯಿಕವಾಗಿ ವಿಶ್ವಾಸ ಹೊಂದಿರುವ ಮೂರನೇ ಪಕ್ಷದ ಮಾಹಿತಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
"ನೀವು ಕೋರಿದ ಮಾಹಿತಿಯು, ಬ್ಯಾಂಕ್ ಬಳಿ ಇರುವ ಮೂರನೇ ಪಕ್ಷದ ವೈಯಕ್ತಿಕ ಮಾಹಿತಿಯಾಗಿದೆ, ಇದರ ಬಹಿರಂಗಪಡಿಸುವಿಕೆಯು ಸೆಕ್ಷನ್ 8(1) (ಇ) & (ಜೆ) ಅಡಿಯಲ್ಲಿ ವಿನಾಯಿತಿ ಪಡೆದಿದೆ. ಆದ್ದರಿಂದ ಮಾಹಿತಿ ನೀಡಲು ನಿರಾಕರಿಸಲಾಗಿದೆ,'' ಎಂದು ಎಸ್‌ಬಿಐ ಹೇಳಿದೆ.