2018ರಿಂದ 16,000 ಕೋಟಿ ರೂ.ಗಳ ಚುನಾವಣಾ ಬಾಂಡ್ ಮಾರಾಟ: ಕಮಿಷನ್, ಇತರ ವೆಚ್ಚಗಳಿಗಾಗಿ ತೆರಿಗೆದಾರರು ಪಾವತಿಸಿದ್ದು 13.5 ಕೋಟಿ ರೂ.

Update: 2023-12-31 11:50 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಸರಕಾರವು 2018ರಲ್ಲಿ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದಾಗಿನಿಂದ 29 ಕಂತುಗಳಲ್ಲಿ ಒಟ್ಟು 15,956.3096 ಕೋಟಿ ರೂ.ಗಳ ಬಾಂಡ್‌ಗಳು ಮಾರಾಟವಾಗಿವೆ. ಆರ್‌ಟಿಐ ಕಾರ್ಯಕರ್ತ ಕಮೊಡೋರ್ ಲೋಕೇಶ್ ಬಾತ್ರಾ ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ಎಸ್‌ಬಿಐ ಈ ಮಾಹಿತಿಯನ್ನು ನೀಡಿದೆ ಎಂದು thewire.in ವರದಿ ಮಾಡಿದೆ.

ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಅಧಿಕಾರ ಹೊಂದಿರುವ ಏಕೈಕ ನಿಯೋಜಿತ ಬ್ಯಾಂಕ್ ಆಗಿರುವ ಎಸ್‌ಬಿಐ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ನಿರ್ವಹಿಸಲು ತನ್ನ ಕಮಿಷನ್, ಮುದ್ರಣ ಮತ್ತು ಇತರ ವೆಚ್ಚಗಳೆಂದು 13.50 ಕೋಟಿ ರೂ.ಗಳ ಹೊರೆಯನ್ನು ಸರಕಾರದ ತಲೆಯ ಮೇಲೆ ಹಾಕಿದೆ.

ಯೋಜನೆಯ ವಿಪರ್ಯಾಸವೆಂದರೆ ದಾನಿಗಳು ಎಸ್‌ಬಿಐಗೆ ಯಾವುದೇ ಸೇವಾ ಶುಲ್ಕ (ಕಮಿಷನ್)ವನ್ನು ಪಾವತಿಸಬೇಕಿಲ್ಲ, ಚುನಾವಣಾ ಬಾಂಡ್‌ಗಳ ಮುದ್ರಣ ವೆಚ್ಚವನ್ನೂ ಅವರು ಭರಿಸಬೇಕಿಲ್ಲ. ಅಪಾರದರ್ಶಕ ಚುನಾವಣಾ ಬಾಂಡ್‌ಗಳ ಯೋಜನೆಯ ಮೂಲಕ ರಾಜಕೀಯ ಪಕ್ಷಗಳು ಅನಾಮಧೇಯ ತೆರಿಗೆ ಮುಕ್ತ ದೇಣಿಗೆಗಳನ್ನು ಸ್ವೀಕರಿಸಲು ವೆಚ್ಚವನ್ನು ಸರಕಾರವೇ ಅಥವಾ ಅಂತಿಮವಾಗಿ ತೆರಿಗೆದಾರರೇ ಭರಿಸುತ್ತಿದ್ದಾರೆ ಎಂದು ಬಾತ್ರಾ ಹೇಳಿದರು.

ಮಾರಾಟಗೊಂಡ ಒಟ್ಟು ಬಾಂಡ್‌ಗಳ ಪೈಕಿ 23.8874 ಕೋ.ರೂ.ಮೌಲ್ಯದ ಬಾಂಡ್‌ಗಳು ನಗದೀಕರಣಗೊಂಡಿಲ್ಲ ಮತ್ತು ಅವುಗಳನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್)ಗೆ ವರ್ಗಾಯಿಸಲಾಗಿದೆ. ಎಪ್ರಿಲ್ 2017 ಮತ್ತು ಮಾರ್ಚ್ 2022ರ ನಡುವೆ ಪಿಎಂಎನ್‌ಆರ್‌ಎಫ್ 2,065.69 ಕೋಟಿ ರೂ.ಗಳನ್ನು ಸ್ವೀಕರಿಸಿದೆ.

ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ನೀಡುವ ಈ ವಿವಾದಾತ್ಮಕ ಯೊಜನೆಯು ಅಪಾರದರ್ಶಕವಾಗಿದೆ ಎಂದು ಟೀಕಿಸಿರುವ ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರತಿಪಕ್ಷ ನಾಯಕರು, ಯೋಜನೆಯ ಮೂಲಕ ಕಪ್ಪುಹಣವು ರಾಜಕೀಯ ಪಕ್ಷಗಳ ಬೊಕ್ಕಸ ಸೇರುವ ಸಾಧ್ಯತೆಯನ್ನೂ ಬೆಟ್ಟು ಮಾಡಿದ್ದಾರೆ. ಈ ಹಿಂದೆ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೀಡಬಹುದಾದ ದೇಣಿಗೆಗೆ ಮಿತಿಯಿತ್ತು,ಆದರೆ ಈಗ ಯಾವುದೇ ಮಿತಿಯಿಲ್ಲ.

ಚುನಾವಣಾ ಬಾಂಡ್‌ಗಳ ಯೋಜನೆಯ ವಿರುದ್ಧ ಅರ್ಜಿಗಳು ಸಲ್ಲಿಕೆಯಾದ ನಾಲ್ಕು ವರ್ಷಗಳ ಬಳಿಕ ಸರ್ವೋಚ್ಚ ನ್ಯಾಯಾಲಯವು ನಡೆಸಿದ ವಿಚಾರಣೆಯಲ್ಲಿ ಕೇಂದ್ರವು ರಾಜಕೀಯ ಪಕ್ಷಗಳಿಗೆ ಬೃಹತ್ ಕಾರ್ಪೊರೇಟ್ ದಾನಿಗಳ ಖಾಸಗಿತನದ ಹಕ್ಕನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದೆ. 2023, ನ.2ರಂದು ಸರ್ವೋಚ್ಚ ನ್ಯಾಯಾಲಯವು ಪ್ರಕರಣದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಯಾರು ಯಾರಿಗೆ ದೇಣಿಗೆ ಹಣ ನೀಡುತ್ತಿದ್ದಾರೆ ಎನ್ನುವುದು ನಾಗರಿಕರಿಗೆ ತಿಳಿದಿರಬೇಕಾದ ಅಗತ್ಯವಿಲ್ಲ ಎಂಬ ಸರಕಾರದ ವಾದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿಯವರು, ಸರಕಾರದ ವಾದವು ಆತಂಕಕಾರಿಯಾಗಿದೆ. ಈ ಹೇಳಿಕೆಯು  ʼಬನಾನಾ ರಿಪಬ್ಲಿಕ್ʼ ಗೆ ಸೂಕ್ತವೇ ಹೊರತು ವಿಶ್ವಗುರುವಾಗಲು ಹಂಬಲಿಸುತ್ತಿರುವ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವಕ್ಕಲ್ಲ ಎಂದು ಹೇಳಿದ್ದರು.

2018ರಲ್ಲಿ ಚುನಾವಣಾ ಬಾಂಡ್‌ಗಳ ಯೋಜನೆ ಆರಂಭಗೊಂಡಾಗಿನಿಂದ ಸಿಂಹಪಾಲನ್ನು ಬಿಜೆಪಿ ಬಾಚಿಕೊಂಡಿದೆ. 9,200 ಕೋ.ರೂ.ಗಳ ಚುನಾವಣಾ ಬಾಂಡ್ ನಿಧಿಗಳ ಪೈಕಿ ಶೇ.57ರಷ್ಟು ಬಿಜೆಪಿ ಪಾಲಾಗಿದ್ದರೆ,ಶೇ.10ರಷ್ಟನ್ನು ಕಾಂಗ್ರೆಸ್ ಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News