ಎಲ್ವಿಷ್ ಯಾದವ್ ಏಕನಾಥ್ ಶಿಂದೆಯವರ ನಿವಾಸದಲ್ಲಿ ಆರತಿ ನೆರವೇರಿಸಿದ್ದ, ಏನಿದು ಮೈತ್ರಿ?:ಸಂಜಯ್ ರಾವುತ್

Update: 2023-11-04 21:57 IST
ಎಲ್ವಿಷ್ ಯಾದವ್ ಏಕನಾಥ್ ಶಿಂದೆಯವರ ನಿವಾಸದಲ್ಲಿ ಆರತಿ ನೆರವೇರಿಸಿದ್ದ, ಏನಿದು ಮೈತ್ರಿ?:ಸಂಜಯ್ ರಾವುತ್

ಸಂಜಯ್ ರಾವುತ್ Photo- PTI

  • whatsapp icon

ಮುಂಬೈ,ನ.4: ರೇವ್ ಪಾಟಿಗಳಲ್ಲಿ ಹಾವಿನ ವಿಷವನ್ನು ಬಳಸಿದ್ದ ಆರೋಪದಲ್ಲಿ ಪ್ರಕರಣ ದಾಖಲಾಗಿರುವ ಯೂಟ್ಯೂಬರ್ ಎಲ್ವಿಷ್ ಯಾದವ್ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆಯವರ ನಿವಾಸಕ್ಕೆ ಭೇಟಿ ನೀಡಿದ್ದ ಮತ್ತು ಗಣಪತಿಗೆ ಆರತಿಯನ್ನು ಬೆಳಗಿದ್ದ ಎಂದು ಶಿವಸೇನೆ (ಠಾಕ್ರೆ ಬಣ) ನಾಯಕ ಸಂಜಯ ರಾವುತ್ ಅವರು ಶನಿವಾರ ಹೇಳಿದರು.

ಏನಿದು ಮೈತ್ರಿ? ಹಾವಿನ ವಿಷವನ್ನು ಮಾರಾಟ ಮಾಡುವ ದೇಶದ ಅತ್ಯಂತ ದೊಡ್ಡ ಡ್ರಗ್ಸ್ ಮಾಫಿಯಾ ಯಾದವಗೆ ಶಿಂದೆ ಹಾರ್ದಿಕ ಸ್ವಾಗತವನ್ನು ನೀಡಿದ್ದರು ಮತ್ತು ಆತ ಅವರ ನಿವಾಸದಲ್ಲಿ ಗಣಪತಿಗೆ ಆರತಿಯನ್ನು ಮಾಡಿದ್ದ. ತನ್ನ ಬಂಗಲೆಗೆ ಯಾರು ಬರುತ್ತಾರೆ ಎಂಬ ಬಗ್ಗೆ ಮುಖ್ಯಮಂತ್ರಿಗಳಿಗೆ ಗುಪ್ತಚರ ಮಾಹಿತಿ ಇರಲಿಲ್ಲವೇ? ಮಹಾರಾಷ್ಟ್ರದಲ್ಲಿ ಮಾದಕ ದ್ರವ್ಯ ಜಾಲ ಮುಖ್ಯಮಂತ್ರಿಗಳ ರಕ್ಷಣೆಯಡಿ ಕಾರ್ಯಾಚರಿಸುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.

ಶುಕ್ರವಾರ ಇದೇ ವಿಷಯವನ್ನು ಪ್ರಸ್ತಾಪಿಸಿದ್ದ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಅತುಲ್ ಲೋಂಧೆಯವರು,ಶಿಂದೆ ತನ್ನ ಅಧಿಕೃತ ನಿವಾಸದಲ್ಲಿ ಪೂಜೆಗೆ ಯಾದವನನ್ನು ಆಹ್ವಾನಿಸಿದ್ದು ಏಕೆ ಎಂದು ಪ್ರಶ್ನಿಸಿದ್ದರು. ಮುಖ್ಯಮಂತ್ರಿಗಳ ನಿವಾಸ ಈಗ ಕ್ರಿಮಿನಲ್‌ಗಳ ಪಾಲಿಗೆ ಪ್ರವಾಸಿ ತಾಣವಾಗಿದೆಯೇ? ಹಾವಿನ ವಿಷದೊಂದಿಗೆ ರೇವ್ ಪಾರ್ಟಿಗಳನ್ನು ಆಯೋಜಿಸಿದ ಆರೋಪ ಹೊತ್ತಿರುವ ಯಾದವನನ್ನು ಮುಖ್ಯಮಂತ್ರಿಗಳ ನಿವಾಸದಲ್ಲಿ ಪೂಜೆಗೆ ವಿಶೇಷವಾಗಿ ಆಹ್ವಾನಿಸಲಾಗಿತ್ತು ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದ ಲೋಂಧೆ,ಶಿಂದೆ ಉಪಸ್ಥಿತಿಯಲ್ಲಿ ಯಾದವ ಆರತಿ ಮಾಡುತ್ತಿರುವ ಚಿತ್ರವನ್ನು ಲಗತ್ತಿಸಿದ್ದರು.

ಬಿಜೆಪಿ ಸಂಸದೆ ಮೇನಕಾ ಗಾಂಧಿಯವರ ಎನ್‌ಜಿಒ ಪೀಪಲ್ ಫಾರ್ ಆ್ಯನಿಮಲ್ಸ್ ಒದಗಿಸಿದ್ದ ಮಾಹಿತಿಯ ಮೇರೆಗೆ ನೊಯ್ಡಾ ಪೋಲಿಸರು ಹಾವಿನ ವಿಷ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ. ಎಫ್‌ಐಆರ್‌ನಲ್ಲಿ ಯಾದವನನ್ನು ಓರ್ವ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ಐವರು ಬಂಧಿತರಿಗೆ ನ್ಯಾಯಾಂಗ ಕಸ್ಟಡಿಯನ್ನು ವಿಧಿಸಲಾಗಿದ್ದು, ಯಾದವನನ್ನು ತಕ್ಷಣ ಬಂಧಿಸುವಂತೆ ಮೇನಕಾ ಗಾಂಧಿ ಆಗ್ರಹಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News