ಹಾವಿನ ವಿಷ ಪ್ರಕರಣ: ಬಲಪಂಥೀಯ ಯೂಟ್ಯೂಬರ್ ಎಲ್ವಿಶ್ ಯಾದವ್ ರನ್ನು 3 ಗಂಟೆಗಳ ವಿಚಾರಣೆಗೊಳಪಡಿಸಿದ ನೊಯ್ಡಾ ಪೊಲೀಸರು
ಹೊಸದಿಲ್ಲಿ: ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಸಲಾಗುತ್ತದೆ ಎಂಬ ಆರೋಪದ ಕುರಿತು ಬಿಗ್ ಬಾಸ್ ಒಟಿಟಿ ಆವೃತ್ತಿಯ ವಿಜೇತ ಎಲ್ವಿಶ್ ಯಾದವ್ ಅವರನ್ನು ಮಂಗಳವಾರ ಮಧ್ಯರಾತ್ರಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ತಾವು ಆಯೋಜಿಸುವ ಔತಣ ಕೂಟಗಳಿಗೆ ಹಾವಿನ ವಿಷ ಪೂರೈಸುವ ಆರೋಪದಲ್ಲಿ ಐದು ಮಂದಿ ಬಂಧಿತರಾದ ನಂತರ, ಈ ಪ್ರಕರಣದಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಬಲಪಂಧೀಯ ಯೂಟ್ಯೂಬರ್ ಎಲ್ವಿಶ್ ಯಾದವ್ ಸಮರ್ಥಿಸಿಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.
ಮಾಧ‍್ಯಮಗಳನ್ನು ತಪ್ಪಿಸಿಕೊಳ್ಳಲು ಸೆಕ್ಟರ್ 20 ಪೊಲೀಸ್ ಠಾಣೆಯನ್ನು ಗೋಪ್ಯವಾಗಿ ತಲುಪಿದ ಎಲ್ವಿಶ್ ಯಾದವ್ ರನ್ನು ಪೊಲೀಸರು ಮೂರು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದರು. ಅವರನ್ನು ಇಂದು ಮತ್ತೆ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಪೊಲೀಸ್ ಆಯುಕ್ತ ಹರೀಶ್ ಚಂದರ್, “ಯೂಟ್ಯೂಬರ್ ಹಾಗೂ ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ಅವರು ಹಾವಿನ ವಿಷ ಪ್ರಕರಣದ ಸಂಬಂಧ ನೊಯ್ಡಾ ಪೊಲೀಸ್ ಠಾಣೆ ಎದುರು ಮಂಗಳವಾರ ರಾತ್ರಿ ಹಾಜರಾದರು. ಪೊಲೀಸರು ಅವರನ್ನು ಮತ್ತೆ ವಿಚಾರಣೆಗೆ ಕರೆದಿದ್ದಾರೆ” ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ, “ಬಂಧಿತರಾಗಿರುವ ಐವರು ಆರೋಪಿಗಳ ಪೈಕಿ ಒಬ್ಬರಾದ ರಾಹುಲ್ ಯಾದವ್ ಹೇಳಿಕೆಯನ್ನು ಆಧರಿಸಿ ಎಲ್ವಿಶ್ ಯಾದವ್ ಅವರನ್ನು ವಿಚಾರಣೆಗೊಳಪಡಿಸಲಾಗುವುದು. ಅಗತ್ಯ ಬಿದ್ದರೆ, ಇಬ್ಬರನ್ನೂ ಮುಖಾಮುಖಿ ವಿಚಾರಣೆಗೊಳಪಡಿಸಲಾಗುವುದು” ಎಂದು ಪೊಲೀಸರು ಹೇಳಿದ್ದರು.
ಇಂತಹುದೇ ರೇವ್ ಪಾರ್ಟಿಗಳು ದಿಲ್ಲಿ ಹಾಗೂ ರಾಜಸ್ಥಾನದಲ್ಲಿ ನಡೆದಿರುವ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಇಂತಹ ಪಾರ್ಟಿಗಳು ಎಲ್ಲ ನಡೆದಿದ್ದವು ಎಂಬುದನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರೇತರ ಸಂಸ್ಥೆಯೊಂದು ನೀಡಿದ ಸುಳಿವನ್ನು ಆಧರಿಸಿ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಐವರನ್ನು ಪೊಲೀಸರು ಬಂಧಿಸಿದ್ದರು. ಇದಕ್ಕೂ ಮುನ್ನ ಪೊಲೀಸರು ರೇವ್ ಪಾರ್ಟಿ ಆಯೋಜಕರನ್ನು ನಾಗರಹಾವು ಹಾಗೂ ಹೆಬ್ಬಾವುಗಳ ಅಗತ್ಯವಿರುವ ಗ್ರಾಹಕರ ಸೋಗಿನಲ್ಲಿ ಸಂಪರ್ಕಿಸಿದ್ದರು. ನಂತರ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದಾಗ ಅವರ ಬಳಿ ಹಾವಿನ ವಿಷ ಪತ್ತೆಯಾಗಿದ್ದು, ಅದನ್ನು ಪರೀಕ್ಷಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಪಾರ್ಟಿಯಲ್ಲಿ ಹಾವಿನ ವಿಷವನ್ನು ಇತರ ರಾಸಾಯನಿಕಗಳೊಂದಿಗೆ ಮಿಶ್ರಣ ಮಾಡಿ ಬಳಸಿರುವುದು ಕಂಡು ಬಂದಿದೆ. ಈಗ ಈ ವಿಷವನ್ನು ಹೆಬ್ಬಾವಿನಿಂದ ಹೊರತೆಗೆದು, ಮಾದಕ ದ್ರವ್ಯವಾಗಿ ಬಳಸಲಾಗುತ್ತಿತ್ತೆ ಎಂಬ ಕುರಿತು ತನಿಖೆ ನಡೆಯುತ್ತಿದೆ.