“ಬಿಹಾರವನ್ನು ಮಹಿಳೆಯೊಬ್ಬಳು ಮುನ್ನಡೆಸುವಂತೆ ಸಬಲೀಕರಣಗೊಳಿಸಿ”
ವಾಷಿಂಗ್ಟನ್: ಬಿಹಾರ ವಿಧಾನಸಭೆಯಲ್ಲಿ ಮಹಿಳೆಯರ ಕುರಿತು ಮಾನಹಾನಿಕಾರಕ ಹೇಳಿಕೆ ನೀಡಿದ ಆರೋಪಕ್ಕೆ ಗುರಿಯಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಅಮೆರಿಕಾ ನಟಿ ಹಾಗೂ ಗಾಯಕಿ ಮೇರಿ ಮಿಲ್ಬೆನ್ ತರಾಟೆಗೆ ತೆಗೆದುಕೊಂಡಿದ್ದು, “ಬಿಹಾರವನ್ನು ಮಹಿಳೆಯೊಬ್ಬಳು ಮುನ್ನಡೆಸುವಂತೆ ಸಬಲೀಕರಣಗೊಳಿಸಿ” ಎಂದು ಕಿವಿಮಾತು ಹೇಳಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, “ನಿತೀಶ್ ಕುಮಾರ್ ಅವರ ಹೇಳಿಕೆಯ ನಂತರ ಧೈರ್ಯವಂತ ಮಹಿಳೆಯೊಬ್ಬರು ಮುಂದೆ ಬಂದು ಬಿಹಾರ ಮುಖ್ಯಮಂತ್ರಿಗಿರಿಗೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಬೇಕಿದೆ ಎಂಬುದು ನನ್ನ ಭಾವನೆ. ನಾನೇನಾದರೂ ಭಾರತೀಯ ನಾಗರಿಕಳಾಗಿದ್ದರೆ ಬಿಹಾರಕ್ಕೆ ಹೋಗಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುತ್ತಿದ್ದೆ. ಬಿಹಾರವನ್ನು ಮುನ್ನಡೆಸಲು ಬಿಜೆಪಿಯು ಮಹಿಳೆಯೊಬ್ಬರನ್ನು ಸಬಲೀಕರಣಗೊಳಿಸಬೇಕಿದೆ. ಅವರ ಮಾತಿಗೆ ಪ್ರತಿಕ್ರಿಯೆಯಾಗಿ ಇದೇ ನೈಜ ಮಹಿಳಾ ಸಬಲೀಕರಣ ಸಂವೇದನೆ ಮತ್ತು ಅಭಿವೃದ್ಧಿಯಾಗಲಿದೆ. ಅಥವಾ ಬಿಹಾರ ರಾಜ್ಯವು ‘ಜವಾನ್’ ಚಿತ್ರದಲ್ಲಿ ಶಾರೂಖ್ ಖಾನ್ ಕರೆ ನೀಡಿರುವಂತೆ ಮತ ಚಲಾಯಿಸಿ, ಬದಲಾವಣೆ ತರಬೇಕಿದೆ” ಎಂದು ಹೇಳಿದ್ದಾರೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಕೂಡಾ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹಿಳೆಯರ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಿದ ಆರೋಪಕ್ಕೆ ಗುರಿಯಾಗಿರುವ ನಿತೀಶ್ ಕುಮಾರ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ರಾಜ್ಯ ವಿಧಾನಸಭೆಯಲ್ಲಿ ಮೂರ್ಖತನದ ಮಾತುಗಳನ್ನು ಆಡಲಾಗಿದೆ ಹಾಗೂ ಅದಕ್ಕಾಗಿ ಯಾವುದೇ ನಾಚಿಕೆಯೂ ಇಲ್ಲ ಎಂದು ಕಿಡಿ ಕಾರಿದ್ದಾರೆ.