ಕಾಂಗ್ರೆಸ್‌ ನಿಂದ ಉಚ್ಛಾಟನೆಯಾಗಿದ್ದ ಮಾಜಿ ಸಂಸದ ಸಂಜಯ್ ನಿರುಪಮ್ ಶಿವಸೇನೆ (ಶಿಂಧೆ ಬಣ) ಸೇರ್ಪಡೆ

Update: 2024-05-04 09:29 GMT

ಸಂಜಯ್ ನಿರುಪಮ್ , ಏಕನಾಥ್ ಶಿಂಧೆ | PC ; X \ @sanjaynirupam

ಮುಂಬೈ: ಕಾಂಗ್ರೆಸ್ ಮಾಜಿ ನಾಯಕ ಸಂಜಯ್ ನಿರುಪಮ್ ಶುಕ್ರವಾರ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾದರು.

19 ವರ್ಷಗಳ ಹಿಂದೆ ಬಾಳ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನೆಯನ್ನು ತೊರೆದಿದ್ದ ಸಂಜಯ್‌ ನಿರುಪಮ್‌ ಬಳಿಕ ಕಾಂಗ್ರೆಸ್‌ ಪಕ್ಷ ಸೇರಿಕೊಂಡಿದ್ದರು.

ಕಳೆದ ತಿಂಗಳು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕಾಂಗ್ರೆಸ್ ಉಚ್ಚಾಟಿಸಲ್ಪಟ್ಟಿದ್ದ ನಿರುಪಮ್‌ ಅವರನ್ನು ಮುಖ್ಯಮಂತ್ರಿ ಶಿಂಧೆ ಅವರು ಪಕ್ಷಕ್ಕೆ ಬರಮಾಡಿಕೊಂಡರು. ನಿರುಪಮ್ ಅವರು ಶಿವಸೇನೆ ಉಪನಾಯಕ ಮತ್ತು ವಕ್ತಾರರಾಗಿ ಕೆಲಸ ಮಾಡಲಿದ್ದಾರೆ ಎಂದು ಶಿಂಧೆ ಘೋಷಿಸಿದ್ದಾರೆ.

ನಿರುಪಮ್ ಅವರು 1990 ರ ದಶಕದಲ್ಲಿ ಶಿವಸೇನೆಯ ಹಿಂದಿ ಮುಖವಾಣಿ 'ದೋಫರ್ ಕಾ ಸಾಮ್ನಾ'ದ ಸಂಪಾದಕರಾಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

2005 ರಲ್ಲಿ ಕಾಂಗ್ರೆಸ್ ಸೇರಿದ ಅವರು, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.

2009 ರ ಚುನಾವಣೆಯಲ್ಲಿ ಮುಂಬೈ ಉತ್ತರ ಲೋಕಸಭಾ ಸ್ಥಾನದಲ್ಲಿ ಸ್ಪರ್ಧಿಸಿ ಬಿಜೆಪಿಯ ಹಿರಿಯ ನಾಯಕ ರಾಮ್ ನಾಯಕ್ ಅವರನ್ನು ಸೋಲಿಸಿದರು.

2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ, ನಿರುಪಮ್ ಕಾಂಗ್ರೆಸ್, ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನೆಯನ್ನು ಒಳಗೊಂಡ ಮಹಾ ವಿಕಾಸ್ ಅಘಾಡಿ ರಚನೆಯನ್ನು ವಿರೋಧಿಸಿದರು.

2024 ರ ಲೋಕಸಭೆ ಚುನಾವಣೆಯಲ್ಲಿ ಮುಂಬೈ ವಾಯವ್ಯ ಸ್ಥಾನದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರು, ಪಕ್ಷಕ್ಕೆ "ಒಂದು ವಾರದ ಗಡುವು" ನೀಡಿದ ನಂತರ ಕಾಂಗ್ರೆಸ್ ಕಳೆದ ತಿಂಗಳು "ಅಶಿಸ್ತು ಮತ್ತು ಪಕ್ಷ ವಿರೋಧಿ ಹೇಳಿಕೆಗಳಿಗಾಗಿ" ಅವರನ್ನು ಆರು ವರ್ಷಗಳ ಕಾಲ ಉಚ್ಚಾಟಿಸಿತು. ಮಹಾ ವಿಕಾಸ್ ಅಘಾಡಿಯ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ಈ ಸ್ಥಾನವನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಸ್ಪರ್ಧಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News