ಇಂದಿಗೆ ಸರಿಯಾಗಿ ಒಂದು ದಶಕದ ಹಿಂದೆ ಭಾರತದ ಪ್ರಧಾನಿಯೊಬ್ಬರ ಕೊನೆಯ ಪತ್ರಿಕಾಗೋಷ್ಠಿ ನಡೆದಿತ್ತು!

Update: 2024-01-03 13:26 GMT

 ಮನಮೋಹನ್‌ ಸಿಂಗ್‌ | Photo: PTI 

ಹೊಸದಿಲ್ಲಿ: ಭಾರತದ ಪ್ರಧಾನಿಯೊಬ್ಬರ “ಕೊನೆಯ ಪತ್ರಿಕಾಗೋಷ್ಠಿ” ಇದೇ ದಿನ, ಅಂದರೆ ಜನವರಿ 3ರಂದು ನಿಖರವಾಗಿ ಒಂದು ದಶಕದ ಹಿಂದೆ ನಡೆದಿತ್ತು ಎಂದು ಪತ್ರಕರ್ತ ಪಂಕಜ್‌ ಪಚೌರಿ ಟ್ವೀಟ್‌ ಮಾಡಿದ್ದಾರೆ.

“ಈ ಪತ್ರಿಕಾಗೋಷ್ಠಿಯಲ್ಲಿ 62 ಪೂರ್ವನಿರ್ಧರಿತವಲ್ಲದ ಪ್ರಶ್ನೆಗಳನ್ನು 100ಕ್ಕೂ ಅಧಿಕ ಪತ್ರಕರ್ತರ ಸಮ್ಮುಖದಲ್ಲಿ ಉತ್ತರಿಸಲಾಗಿತ್ತು,” ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಈ ಪತ್ರಿಕಾಗೋಷ್ಠಿಯ ವೀಡಿಯೋವನ್ನೂ ಅವರು ಹಂಚಿಕೊಂಡಿದ್ದು ಆಗಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ಪತ್ರಿಕಾಗೋಷ್ಠಿ ನಡೆಸಿದ್ದರು. ಪಚೌರಿ ಅವರು ಆಗ ಸಿಂಗ್‌ ಅವರ ಮಾಹಿತಿ ಮತ್ತು ಸಂವಹನ ಸಲಹೆಗಾರರಾಗಿದ್ದರು. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಬಿಜೆಪಿ ಅವರು ಮೌನವಾಗಿದ್ದಾರೆಂದು ಟೀಕಿಸುತ್ತಿದ್ದರು.

ಇದು ಭಾರತದ ಪ್ರಧಾನಿಯೊಬ್ಬರು ನಡೆಸಿದ ಭಾರತದಲ್ಲಿ ನಡೆಸಿದ ಕೊನೆಯ ಪತ್ರಿಕಾಗೋಷ್ಠಿಯೆಂದೇ ಹೇಳಬಹುದು. ಏಕೆಂದರೆ ಭಾರತದಲ್ಲಿ ಯಾವುದೇ ಪತ್ರಿಕಾಗೋಷ್ಠಿ ನಡೆಸದೇ ಇದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಭೇಟಿ ವೇಳೆ ಕಳೆದ ವರ್ಷ ಶ್ವೇತಭವನದಲ್ಲಿ ಪತ್ರಕರ್ತರ ಎರಡು ಪ್ರಶ್ನೆಗಳಿಗೆ ಉತ್ತರಿಸಿದ್ದರು.

ಆದರೆ 2014ರಲ್ಲಿ ಮೊದಲು ಅಧಿಕಾರಕ್ಕೆ ಬಂದ ಮೋದಿ ಅಂದಿನಿಂದ ಇಂದಿನವರೆಗೆ ಭಾರತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ.

ಆದರೆ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿ ನಡೆಸಿದ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಮುಕ್ತ ಮನಸ್ಸಿನಿಂದ ತಮ್ಮ ಸರ್ಕಾರದ ಸಾಧನೆ ಮತ್ತು ವೈಫಲ್ಯಗಳ ಬಗ್ಗೆ ಮಾತನಾಡಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಅವರು ಲೋಕಸಭಾ ಚುನಾವಣೆಗೆ ಮುಂಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ವೈಫಲ್ಯ, ಉತ್ಪಾದನಾ ರಂಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿರುವುದರ ಬಗ್ಗೆ ಮಾತನಾಡಿದ್ದರು.

ಪಚೌರಿ ಅವರ ಪೋಸ್ಟ್‌ ಶೇರ್‌ ಮಾಡಿದ ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ, ತಮ್ಮ 10 ವರ್ಷದ ಸೇವಾವಧಿಯಲ್ಲಿ ಮನಮೋಹನ್‌ ಸಿಂಗ್‌ 117 ಪತ್ರಿಕಾಗೋಷ್ಠಿ ನಡೆಸಿದ್ದಾರೆಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News