ದಿಲ್ಲಿ ವಿಧಾನಸಭೆಯಲ್ಲಿ ಮಣಿಪುರ ಬಿಕ್ಕಟ್ಟಿನ ಬಗ್ಗೆ ಚರ್ಚೆಗೆ ವಿರೋಧಿಸಿದ ನಾಲ್ವರು ಬಿಜೆಪಿ ಶಾಸಕರ ಉಚ್ಚಾಟನೆ

Update: 2023-08-17 17:10 GMT

Photo : PTI 

ಹೊಸದಿಲ್ಲಿ: ದಿಲ್ಲಿ ವಿಧಾನಸಭೆಯಲ್ಲಿ ಬುಧವಾರದ ಕಲಾಪದ ವೇಳೆ ಮಣಿಪುರ ವಿಷಯವನ್ನು ಚರ್ಚಿಸುವುದನ್ನು ಬಿಜೆಪಿ ಶಾಸಕರು ವಿರೋಧಿಸಿದ್ದು, ಸದನವು ಭಾರೀ ಕೋಲಾಹಲಕ್ಕೆ ಸಾಕ್ಷಿಯಾಯಿತು. ಸದನ ಕಲಾಪಗಳಿಗೆ ಅಡ್ಡಿಪಡಿಸಿದ ನಾಲ್ವರು ಬಿಜೆಪಿ ಶಾಸಕರನ್ನು ಭದ್ರತಾ ಸಿಬ್ಬಂದಿ ಹೊರಗೊಯ್ದರು.

ವಿಧಾನಸಭಾ ಕಲಾಪದ ವೇಳೆ ಆಪ್ ಶಾಸಕ ದುರ್ಗೇಶ್ ಪಾಠಕ್ ಅವರು ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಲ್ಲಿ ಭುಗಿಲೆದ್ದಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಸಂಕ್ಷಿಪ್ತ ಚರ್ಚೆಯನ್ನು ಆರಂಭಿಸಿದ್ದರು. ಆಗ ಬಿಜೆಪಿ ಸದಸ್ಯರು ಎದ್ದು ನಿಂತು ವಿರೋಧಿಸಿದರು. ಸದನದಲ್ಲಿ ದಿಲ್ಲಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರವೇ ಚರ್ಚೆಯಾಗಬೇಕೆಂದು ಅವರು ಆಗ್ರಹಿಸಿದರು. ಬಿಜೆಪಿ ಶಾಸಕರ ನಿಲುವಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಸ್ಪೀಕರ್ ರಾಖಿ ಬಿರ್ಲಾ ಅವರು, ‘‘ಈ ಸದನದಲ್ಲಿ ಮಣಿಪುರ ಪರಿಸ್ಥಿತಿಯ ಬಗೆಗಿನ ಕಳವಳನ್ನು ಚರ್ಚಿಸುವುದು ಯೋಗ್ಯವಲ್ಲವೇ ಎಂದು ನೀವು ಭಾವಿಸುತ್ತಿದ್ದೀರಾ ಎಂದರು. ಉತ್ತರಪ್ರದೇಶದ ವಿಧಾನಸಭೆ ಕೂಡಾ ಮಣಿಪುರ ಬಿಕ್ಕಟ್ಟಿನ ಬಗ್ಗೆ ತನ್ನ ಕಲಾಪದ ಸಮಯವನ್ನು ಮೀಸಲಿರಿಸಿತ್ತು’’ ಎಂದು ಅವರು ಹೇಳಿದರು.

ರಾಖಿ ಬಿರ್ಲಾ ಅವರ ಮಧ್ಯಪ್ರವೇಶದ ನಡುವೆಯೂ ಬಿಜೆಪಿ ಶಾಸಕರು ಪ್ರತಿಭಟನೆ ಮುಂದುವರಿಸಿದರು. ಆಗ ಸ್ಪೀಕರ್ ಆದೇಶದಂತೆ ನಾಲ್ವರು ಬಿಜೆಪಿ ಶಾಸಕರಾದ ಅಭಯ್ ವರ್ಮಾ, ಜಿಕತೇಂದರ್ ಮಹಾಜನ್, ಅಜಯ ಮಹಾವಾರ್ ಹಾಗೂ ಓ.ಪಿ. ಶರ್ಮಾ ಅವರನ್ನು ಭದ್ರತಾ ಸಿಬ್ಬಂದಿ ಸದನದಿಂದ ಹೊರಗೆ ಹೊತ್ತೊಯ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News