ಹವಾಮಾನ ವೈಪರೀತ್ಯ ಘಟನೆ : ದೇಶದಲ್ಲಿ 9 ತಿಂಗಳಲ್ಲಿ 2900ಕ್ಕೂ ಅಧಿಕ ಸಾವು!

Update: 2023-11-29 17:10 GMT

Photo: PTI 

ಹೊಸದಿಲ್ಲಿ: ಭಾರತವು ಈ ವರ್ಷದ ಮೊದಲ 9 ತಿಂಗಳುಗಳಲ್ಲಿ ಹೆಚ್ಚುಕಡಿಮೆ ಪ್ರತಿದಿನವೂ ಅತಿರೇಕದ ಹವಾಮಾನ ವೈಪರೀತ್ಯಗಳನ್ನು ಅನುಭವಿಸಿದ್ದು, ಇದರಿಂದಾಗಿ 2900ಕ್ಕೂ ಅಧಿಕ ಸಾವುಗಳು ಸಂಭವಿಸಿರುವುದಾಗಿ ವರದಿಯೊಂದು ಬುಧವಾರ ಬಹಿರಂಗಪಡಿಸಿದೆ.

ಭಾರತದಲ್ಲಿ 2023ರ ಜನವರಿಯಿಂದ ಸೆಪ್ಟೆಂಬರ್ ವರೆಗಿನ ಶೇ.86 ರಷ್ಟು ದಿನಗಳಲ್ಲಿ ಹವಾಮಾನ ವೈಪರೀತ್ಯಗಳು ಕಂಡುಬಂದಿದ್ದವು ಎಂದು ಸ್ವತಂತ್ರ ಚಿಂತನ ಚಿಲುಮೆಯಾದ ವಿಜ್ಞಾನ ಹಾಗೂ ಪರಿಸರ (ಸಿಎಸ್ಇ) ಕೇಂದ್ರದ ವರದಿ ತಿಳಿಸಿದೆ.

ಈ ಅವಧಿಯಲ್ಲಿ ಅತಿರೇಕದ ಹವಾಮಾನದಿಂದಾಗಿ 2923 ಮಂದಿ ಸಾವನ್ನಪ್ಪಿದ್ದಾರೆ. 20 ಲಕ್ಷ ಹೆಕ್ಟೇರುಗಳಷ್ಟು ಬೆಳೆಗಳು ಹಾನಿಗೀಡಾಗಿವೆ. 80 ಸಾವಿರಕ್ಕೂ ಅಧಿಕ ಮನೆಗಳು ನಾಶವಾಗಿವೆ ಹಾಗೂ 92 ಸಾವಿರಕ್ಕೂ ಅಧಿಕ ಪ್ರಾಣಿಗಳು ಸಾವನ್ನಪ್ಪಿವೆ.

ಆದರೆ ಅಧ್ಯಯನದ ವೇಳೆ ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲದೆ ಇರುವುದರಿಂದ ಮೇಲೆ ಉಲ್ಲೇಖಿಸಲಾದ ಸಂಖ್ಯೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

ಮಧ್ಯಪ್ರದೇಶದಲ್ಲಿ 138 ಹವಾಮಾನ ವೈಪರೀತ್ಯದ ಘಟನೆಗಳು ವರದಿಯಾಗಿದ್ದು, ಇದು ದೇಶದಲ್ಲೇ ಗರಿಷ್ಠವಾಗಿದೆ. ಆದರೆ ಅತ್ಯಧಿಕ ಸಂಖ್ಯೆಯ ಸಾವುಗಳು (642)ಬಿಹಾರದಲ್ಲಿ ಸಂಭವಿಸಿವೆ. ಹಿಮಾಚಲ ಪ್ರದೇಶ (365) ಹಾಗೂ ಉತ್ತರಪ್ರದೇಶ (341) ಆನಂತರದ ಸ್ಥಾನಗಳಲ್ಲಿವೆ.

ಪಂಜಾಬಿನಲ್ಲಿ ಗರಿಷ್ಠ ಸಂಖ್ಯೆಯ ಪ್ರಾಣಿಗಳು ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿದ್ದರೆ, ಹಿಮಾಚಲಪ್ರದೇಶದಲ್ಲಿ ಅತ್ಯಧಿಕ ಮನೆಗಳಿಗೆ ಹಾನಿಯಾಗಿವೆ.

ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕೇರಳವು ಗರಿಷ್ಠ ಸಂಖ್ಯೆಯ ಹವಾಮಾನ ವೈಪರೀತ್ಯದ ದಿನ (60)ಗಳನ್ನು ಹಾಗೂ ಸಾವುಗಳನ್ನು (60)ಕಂಡಿದೆ. ಕರ್ನಾಟಕವು ತೀವ್ರವಾದ ನಾಶವನ್ನು ಕಂಡಿದ್ದು, ಹನ್ನೊಂದು ಸಾವಿರ ಮನೆಗಳು ಹಾನಿಗೀಡಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News