ಆಸ್ಪತ್ರೆಗೆ ಪ್ರೊ.ಸಾಯಿಬಾಬಾ ದೇಹದಾನಕ್ಕೆ ಕುಟುಂಬದ ನಿರ್ಧಾರ
ಹೈದರಾಬಾದ್ : ಶನಿವಾರ ಇಲ್ಲಿ ನಿಧನರಾದ ದಿಲ್ಲಿ ವಿವಿಯ ಮಾಜಿ ಪ್ರೊಫೆಸರ್ ಜಿ.ಎನ್.ಸಾಯಿಬಾಬಾರ ಪಾರ್ಥಿವ ಶರೀರವನ್ನು ಅವರ ಅಪೇಕ್ಷೆಯಂತೆ ಆಸ್ಪತ್ರೆಗೆ ದಾನ ಮಾಡಲು ಅವರ ಕುಟುಂಬವು ನಿರ್ಧರಿಸಿದೆ. ಸಾಯಿಬಾಬಾರ ಕಣ್ಣುಗಳನ್ನು ಈಗಾಗಲೇ ಹೈದರಾಬಾದ್ ನ ಎಲ್.ವಿ.ಪ್ರಸಾದ್ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಾಯಿಬಾಬಾರ ಪಾರ್ಥಿವ ಶರೀರವನ್ನು ಸೋಮವಾರ ಸಂಬಂಧಿಗಳು, ಸ್ನೇಹಿತರು ಮತ್ತು ಹಿತೈಷಿಗಳ ಅಂತಿಮ ದರ್ಶನಕ್ಕಾಗಿ ಹೈದರಾಬಾದ್ ನ ಜವಾಹರ ನಗರದಲ್ಲಿ ಇರಿಸಲಾಗುವುದು. ಬಳಿಕ ಅವರ ಇಚ್ಛೆಯಂತೆ ದೇಹವನ್ನು ಆಸ್ಪತ್ರೆಗೆ ದಾನ ಮಾಡಲಾಗುವುದು ಎಂದು ಕುಟುಂಬವು ಹೇಳಿಕೆಯಲ್ಲಿ ತಿಳಿಸಿದೆ.
ಡಾ.ಜಿ.ಎನ್.ಸಾಯಿಬಾಬಾ ಅವರು ಪತ್ನಿ ವಸಂತ ಕುಮಾರಿಯವರನ್ನು ಅಗಲಿದ್ದಾರೆ.
58ರ ಹರೆಯದ ಸಾಯಿಬಾಬಾ ಪಿತ್ತಕೋಶದ ಸೋಂಕು ಮತ್ತು ಇತರ ತೊಂದರೆಗಳಿಂದಾಗಿ ಇಲ್ಲಿಯ ನಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಹೃದಯ ಸ್ತಂಭನಕ್ಕೆ ತುತ್ತಾಗಿದ್ದ ಅವರು ರಾತ್ರಿ ಒಂಭತ್ತು ಗಂಟೆಯ ಸುಮಾರಿಗೆ ಕೊನೆಯುಸಿರೆಳೆದಿದ್ದರು. ಅವರು ಶಾಶ್ವತವಾಗಿ ಪಾರ್ಶ್ವವಾಯು ಪೀಡಿತರಾಗಿದ್ದರು.
ಬುಡಕಟ್ಟು ಪಂಗಡಗಳ ಹಕ್ಕುಗಳ ಹೋರಾಟಗಾರ ಹಾಗೂ ಸರಕಾರದ ವೈಫಲ್ಯಗಳ ಟೀಕಾಕಾರರಾಗಿದ್ದ ಸಾಯಿಬಾಬಾರನ್ನು ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿಸಿ ಜೈಲಿಗೆ ತಳ್ಳಲಾಗಿತ್ತು.
2017ರಲ್ಲಿ ಸೆಷನ್ಸ್ ನ್ಯಾಯಾಲಯವೊಂದು ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದ ಮತ್ತು ದೇಶದ ವಿರುದ್ಧ ಯುದ್ಧ ಸಾರಿದ್ದ ಆರೋಪಗಳಲ್ಲಿ ಸಾಯಿಬಾಬಾ ಮತ್ತು ಇತರ ಐವರನ್ನು ದೋಷಿಗಳೆಂದು ಘೋಷಿಸಿತ್ತು.
ನಾಗಪುರ ಸೆಂಟ್ರಲ್ ಜೈಲಿನಲ್ಲಿ 10 ವರ್ಷಗಳ ಕಾಲ ಬಂಧನದಲ್ಲಿದ್ದ ಸಾಯಿಬಾಬಾ ಅವರನ್ನು ಬಾಂಬೆ ಉಚ್ಛ ನ್ಯಾಯಾಲಯವು ಪ್ರಕರಣದಲ್ಲಿ ಖುಲಾಸೆಗೊಳಿಸಿದ ಕಳೆದ ಮಾರ್ಚ್ ನಲ್ಲಿ ಅವರು ಬಂಧಮುಕ್ತಗೊಂಡಿದ್ದರು.
ದಿಲ್ಲಿ ವಿವಿಯ ರಾಮಲಾಲ ಆನಂದ ಕಾಲೇಜಿನಲ್ಲಿ ಇಂಗ್ಲಿಷ್ ಬೋಧಿಸುತ್ತಿದ್ದ ಸಾಯಿಬಾಬಾರನ್ನು 2014ರಲ್ಲಿ ಬಂಧಿಸಲ್ಪಟ್ಟ ಬಳಿಕ ಸೇವೆಯಿಂದ ವಜಾಗೊಳಿಸಲಾಗಿತ್ತು ಮತ್ತು ಅವರ ಅಧಿಕೃತ ನಿವಾಸವನ್ನು ತೆರವುಗೊಳಿಸಲಾಗಿತ್ತು.