ಪಂಜಾಬಿನಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಆಪ್ ವಿದಾಯ!

Update: 2024-02-10 16:35 GMT

 ಅರವಿಂದ ಕೇಜ್ರಿವಾಲ್ | Photo: PTI 

ಚಂಡಿಗಡ : ಪಂಜಾಬಿನಲ್ಲಿ ತನ್ನ ಪಕ್ಷವು ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಭಾಗವಾಗಿರುವುದಿಲ್ಲ ಹಾಗೂ ರಾಜ್ಯದ ಎಲ್ಲ 13 ಮತ್ತು ಚಂಡಿಗಡದ ಒಂದು ಲೋಕಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಆಪ್ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಪ್ರಕಟಿಸಿದರು.

ಪಂಜಾಬ್ ಸರಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಮನೆಬಾಗಿಲಿಗೆ ಪಡಿತರ ವಿತರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡಿದ ಕೇಜ್ರಿವಾಲ್, ಪಕ್ಷವು ಮುಂದಿನ 10-15 ದಿನಗಳಲ್ಲಿ ಈ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ ಎಂದು ತಿಳಿಸಿದರು.

‘ಎರಡು ವರ್ಷಗಳ ಹಿಂದೆ 117 ವಿಧಾನಸಭಾ ಸ್ಥಾನಗಳ ಪೈಕಿ 92ನ್ನು ನಮಗೆ ನೀಡಿ ನಮ್ಮನ್ನು ಆಶೀರ್ವದಿಸಿದ್ದೀರಿ. ಎರಡು ತಿಂಗಳುಗಳ ಬಳಿಕ ಲೋಕಸಭಾ ಚುನಾವಣೆ ನಡೆಯಲಿದ್ದು, ಮತ್ತೊಮ್ಮೆ ನಿಮ್ಮ ಆಶೀರ್ವಾದಗಳನ್ನು ಕೋರುತ್ತಿದ್ದೇನೆ’ ಎಂದು ಹೇಳಿದರು.

ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ದಾಳಿ ನಡೆಸಿದ ಕೇಜ್ರಿವಾಲ್, ಕಾಂಗ್ರೆಸ್ ಅಥವಾ ಅಕಾಲಿ ದಳ ಪಂಜಾಬಿನಲ್ಲಿ ಅಧಿಕಾರಕ್ಕೇರಿದಾಗಿನಿಂದ ಯಾವುದೇ ಒಳ್ಳೆಯ ಕೆಲಸವನ್ನು ಮಾಡಿವೆಯೇ? ಎಂದು ಸೇರಿದ ಜನರನ್ನು ಪ್ರಶ್ನಿಸಿದರು.

ರಾಜ್ಯದ ಭಗವಂತ ಮಾನ್ ಸರಕಾರವನ್ನು ಹೊಗಳಿದ ಅವರು, ಅದು ಕಳೆದೆರಡು ವರ್ಷಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News