ಬಿಜೆಪಿಯನ್ನು ಸೋಲಿಸಲು ಕಾರ್ಯತಂತ್ರ ರೂಪಿಸಲಿರುವ ರೈತರ ಸಮಾವೇಶ: ವರದಿ

Update: 2024-01-13 10:36 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: 500ಕ್ಕೂ ಅಧಿಕ ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)ದ ರಾಷ್ಟ್ರೀಯ ಸಮಾವೇಶವು ಜ.16ರಂದು ಪಂಜಾಬಿನ ಜಲಂಧರದಲ್ಲಿ ನಡೆಯಲಿದೆ. ಸಭೆಯು ಮುಂಬರುವ ಲೋಕಸಭಾ ಚುನಾವಣೆಗಳಿಗೆ ಮುನ್ನ ಪರ್ಯಾಯ ಕೃಷಿ ಮತ್ತು ಕೈಗಾರಿಕಾ ನೀತಿಗಳನ್ನು ಚರ್ಚಿಸಲಿದೆ. ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾರ್ಯತಂತ್ರಗಳನ್ನೂ ರೈತ ನಾಯಕರು ರೂಪಿಸಲಿದ್ದಾರೆ ಎಂದು thehindu.com ವರದಿ ಮಾಡಿದೆ.

ದೇಶಾದ್ಯಂತದ ಘಟಕಗಳಿಂದ ಸುಮಾರು 1,000 ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಎಸ್‌ಕೆಎಂ ಹೇಳಿಕೆಯಲ್ಲಿ ತಿಳಿಸಿದೆ. ರೈತರು,ಕಾರ್ಮಿಕರು ಮತ್ತು ಜನರಿಗೆ ಹಾನಿಕಾರಕವಾಗಿರುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರದ ಕಾರ್ಪೊರೇಟ್ ಪರ ಆರ್ಥಿಕ ನೀತಿಗಳನ್ನು ಸಮಾವೇಶವು ಬಯಲಿಗೆಳೆಯಲಿದೆ. ಈ ನೀತಿಗಳು ಭಾರೀ ಪ್ರಮಾಣದಲ್ಲಿ ನಿರುದ್ಯೋಗ, ಬೆಲೆಏರಿಕೆ, ಬಡತನ, ಋಣಭಾರ ಮತ್ತು ಗ್ರಾಮೀಣ ಜನರ ಅನಿಯಂತ್ರಿತ ವಲಸೆಗೆ ಕಾರಣವಾಗಿವೆ ಎಂದು ಹೇಳಿಕೆಯು ತಿಳಿಸಿದೆ.

ಜಿಡಿಪಿ ಆಧಾರದಲ್ಲಿ ಕೇಂದ್ರದ ಅಭಿವೃದ್ಧಿ ನಿರೂಪಣೆ ಮತ್ತು ದೇಶವು ಮೂರು ಲಕ್ಷ ಕೋಟಿ ಡಾಲರ್‌ಗಳ ಆರ್ಥಿಕತೆಯಾಗುತ್ತಿದೆ ಎಂಬ ಹೇಳಿಕೆಗಳನ್ನೂ ಸಮಾವೇಶವು ಚರ್ಚಿಸಲಿದೆ. ಇಂತಹ ಹೇಳಿಕೆಗಳು ತಲಾದಾಯದಲ್ಲಿ ಕುಸಿತ, ಹೆಚ್ಚುತ್ತಿರುವ ಆದಾಯ ಅಸಮಾನತೆ ಹಾಗೂ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ ನಿರಾಕರಣೆಯನ್ನು ಮುಚ್ಚಿಟ್ಟಿವೆ ಎಂದು ಎಸ್‌ಕೆಎಂ ಹೇಳಿದೆ.

ದಿಲ್ಲಿಯಲ್ಲಿನ ಪ್ರತಿಭಟನೆಗಳನ್ನು ತಾವು ಹಿಂದೆಗೆದುಕೊಂಡು ಎರಡು ವರ್ಷಗಳೇ ಕಳೆದಿವೆ, ಆದರೂ ಪ್ರಧಾನಿಯವರು ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಜಾರಿ, ರೈತರು ಮತ್ತು ಕೃಷಿ ಕಾರ್ಮಿಕರ ಸಾಲಮನ್ನಾ,ವಿದ್ಯುತ್ ಖಾಸಗೀಕರಣವನ್ನು ನಿಲ್ಲಿಸುವುದು ಮತ್ತು ರೈತರ ಜಮೀನುಗಳು ಹಾಗೂ ಮನೆಗಳಲ್ಲಿ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ ಸೇರಿದಂತೆ ರೈತರಿಗೆ ನೀಡಿದ್ದ ಯಾವುದೇ ಲಿಖಿತ ಭರವಸೆಯನ್ನು ಈಡೇರಿಸಿಲ್ಲ ಎಂದು ಎಸ್‌ಕೆಎಂ ಹೇಳಿಕೆಯಲ್ಲಿ ಬೆಟ್ಟು ಮಾಡಿದೆ.

ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯು ರೈತರು ಮತ್ತು ಕೃಷಿಯನ್ನು ರಕ್ಷಿಸುವ ಬದಲು ಕಾರ್ಪೊರೇಟ್‌ಗಳ ಲಾಭಕ್ಕಾಗಿ ಕಾರ್ಯಾಚರಿಸುತ್ತಿರುವುದರಿಂದ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟವನ್ನು ಅನುಭವಿಸಿರುವ ದೇಶದ ಹೆಚ್ಚಿನ ಭಾಗಗಳಲ್ಲಿಯ ರೈತರಿಗೆ ವಿಮೆ ಮತ್ತು ಸಾಕಷ್ಟು ಪರಿಹಾರ ದೊರಕಿಲ್ಲ ಎಂದೂ ಅದು ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News