ಮಣಿಪುರ ಹಿಂಸಾಚಾರ | ಜಿರಿಬಾಮ್ ನಲ್ಲಿ 5 ಚರ್ಚ್ ಗಳು, 14 ಮನೆಗಳನ್ನು ಸುಟ್ಟು ಹಾಕಲಾಗಿದೆ: ITLF ಆರೋಪ
ಇಂಫಾಲ್: ಮಣಿಪುರದ ಜಿರಿಬಾಮ್ನ ಲ್ಲಿ ರವಿವಾರ ರಾತ್ರಿ ಕನಿಷ್ಠ ಐದು ಚರ್ಚ್ ಗಳು, ಒಂದು ಶಾಲೆ, ಪೆಟ್ರೋಲ್ ಪಂಪ್ ಮತ್ತು 14 ಬುಡಕಟ್ಟು ಜನಾಂಗಕ್ಕೆ ಸೇರಿದ ಮನೆಗಳನ್ನು ಸುಟ್ಟುಹಾಕಲಾಗಿದೆ ಎಂದು ಕುಕಿ-ಜೋ ಬುಡಕಟ್ಟು ಸಂಘಟನೆಯಾದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ(ITLF) ಹೇಳಿದೆ.
ಶನಿವಾರ ರಾತ್ರಿ ಚರ್ಚ್ ಗಳು, ಶಾಲೆ, ಪೆಟ್ರೋಲ್ ಪಂಪ್ ಮತ್ತು ಮನೆಗಳನ್ನು ಸುಟ್ಟುಹಾಕಿರುವುದನ್ನು ಖಂಡಿಸಿದ ಐಟಿಎಲ್ಎಫ್, ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಜಿರಿಬಾಮ್ ಪಟ್ಟಣದಲ್ಲಿ ಬೀಡುಬಿಟ್ಟಿರುವ ಭದ್ರತಾ ಪಡೆಗಳು ಕಟ್ಟಡಗಳನ್ನು ರಕ್ಷಿಸಲು ವಿಫಲವಾಗಿದೆ ಎಂದು ಆರೋಪಿಸಿದೆ.
ಪದೇ ಪದೇ ಚರ್ಚ್ಗಳನ್ನು ಏಕೆ ಗುರಿಯಾಗಿಸಲಾಗುತ್ತಿದೆ ಎಂದು ಪ್ರಶ್ನಿಸಿರುವ ಬುಡಕಟ್ಟು ಸಂಸ್ಥೆ ಐಟಿಎಲ್ಎಫ್, ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಪ್ರಾರಂಭವಾದಾಗಿನಿಂದ 360ಕ್ಕೂ ಹೆಚ್ಚು ಚರ್ಚ್ ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಿದೆ.
ಮೈತೈ ಬೆಂಬಲಿತ ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಕುಕಿ-ಜೋ ನಾಗರಿಕರ ಮೇಲೆ ಮೂಲಭೂತವಾದಿ ಸಂಘಟನೆಗಳು ನಡೆಸುತ್ತಿರುವ ದಾಳಿಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಐಟಿಎಲ್ಎಫ್ ಆರೋಪಿಸಿದೆ. ರಾಜ್ಯದ ಶಸ್ತ್ರಾಸ್ತ್ರ ಪಡೆಗಳಿಂದ ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಈ ಗುಂಪುಗಳನ್ನು ಹತ್ತಿಕ್ಕಬೇಕು ಕೇಂದ್ರ ಸರ್ಕಾರಕ್ಕೆ ಐಟಿಎಲ್ ಎಫ್ ಆಗ್ರಹಿಸಿದೆ.
ಭಾರತೀಯ ಯುವ ಕಾಂಗ್ರೆಸ್(IYC) ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ವಿರುದ್ಧ ಕ್ಯಾಂಡಲ್ಲೈಟ್ ಮೆರವಣಿಗೆ ನಡೆಸಿದ್ದು, ಕೇಂದ್ರ ಸರ್ಕಾರ ತುರ್ತು ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿದೆ. ಜನಾಂಗೀಯ ಕಲಹವನ್ನು ತಡೆಯಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಕೇಂದ್ರವು ತ್ವರಿತ ಮತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.