ರೈತರ 'ದಿಲ್ಲಿ ಚಲೋ' ಮೆರವಣಿಗೆ ಪುನರಾರಂಭ: ಶಂಭು ಗಡಿಯಲ್ಲಿ ಬಿಗಿ ಭದ್ರತೆ, ಅಂಬಾಲಾದಲ್ಲಿ ನಿಷೇಧಾಜ್ಞೆ

Update: 2024-12-06 06:09 GMT

Photo credit: PTI

ಹೊಸದಿಲ್ಲಿ: ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಒಂಬತ್ತು ತಿಂಗಳಿನಿಂದ ಪಂಜಾಬ್-ಹರ್ಯಾಣ ಗಡಿಯಲ್ಲಿ ಮೊಕ್ಕಾಂ ಹೂಡಿರುವ ರೈತರು ಶುಕ್ರವಾರ ಮತ್ತೆ ಸಂಸತ್ತಿಗೆ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ಪುನರಾರಂಭಿಸಲು ಮುಂದಾಗಿದ್ದಾರೆ.

ಶಂಭು ಗಡಿಯಿಂದ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುವ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್-ಹರ್ಯಾಣ ಗಡಿಯಲ್ಲಿ ಭಾರೀ ಬ್ಯಾರಿಕೇಡ್ಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಅಂಬಾಲಾ ಜಿಲ್ಲಾಡಳಿತವು ಐವರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಸಭೆ ಸೇರದಂತೆ ನಿಷೇಧಾಜ್ಞೆ ವಿಧಿಸಿದೆ.

ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾವು ಕಳೆದ ಎಂಟು ತಿಂಗಳಿಂದ ಇಲ್ಲಿ ಕುಳಿತಿದ್ದೇವೆ. ಟ್ರ್ಯಾಕ್ಟರ್ ಗಳ ಬದಲಿಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ಮಾಡಲಿದ್ದೇವೆ. ಸುಮಾರು 100 ರೈತರು ಶಂಭು ಗಡಿಯಿಂದ ಮೆರವಣಿಗೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ನಮ್ಮ ಆಂದೋಲನಕ್ಕೆ ಖಾಪ್ ಪಂಚಾಯತ್‌ ಗಳು ಮತ್ತು ವ್ಯಾಪಾರ ಸಮುದಾಯದ ಸದಸ್ಯರು ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ.

ಎಂಎಸ್ ಪಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಕಳೆದ ಫೆಬ್ರವರಿ 13 ಮತ್ತು ಫೆಬ್ರವರಿ 21ರಂದು ದಿಲ್ಲಿ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದ್ದರು. ಆದರೆ ಪಂಜಾಬ್-ಹರ್ಯಾಣ ಗಡಿಯಲ್ಲಿರುವ ಶಂಭು ಮತ್ತು ಖಾನೌರಿಯಲ್ಲಿ ಅವರನ್ನು ಭದ್ರತಾ ಪಡೆಗಳು ತಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News