ಪಂಜಾಬ್‌ನಲ್ಲಿ ರೈತರಿಂದ ರೈಲು ತಡೆ: ಪ್ರತಿಭಟನೆಯ ನಡುವೆಯೇ ಕೇಂದ್ರದೊಂದಿಗೆ ಮುಂದುವರಿದ ಮಾತುಕತೆ

Update: 2024-02-15 07:44 GMT

Photo: PTI

ಹೊಸದಿಲ್ಲಿ: ಪಂಜಾಬ್ ವಿಭಾಗದ ಭಾರತೀಯ ಕಿಸಾನ್ ಯೂನಿಯನ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಹರ್ಮೀತ್ ಸಿಂಗ್ ಕಡಿಯನ್ ಫೆಬ್ರವರಿ 16ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಇದರೊಂದಿಗೆ ಫೆ. 15ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಟೋಲ್ ಪ್ಲಾಝಾಗಳ ಬಳಿ ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ.

ಈ ನಡುವೆ ಕೇಂದ್ರ ಸಚಿವರು ಹಾಗೂ ರೈತರು ಮೂರನೆ ಸುತ್ತಿನ ಮಾತುಕತೆಗೆ ಸಜ್ಜಾಗುತ್ತಿದ್ದು, ಇದಕ್ಕೂ ಮುನ್ನ ನಡೆದಿದ್ದ ಎರಡು ಸುತ್ತಿನ ಮಾತುಕತೆಗಳು ಯಾವುದೇ ಪರಿಹಾರ ಕಾಣದೆ ವಿಫಲಗೊಂಡಿದ್ದವು. ಸಾವಿರಾರು ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸುವ ಪ್ರತಿಜ್ಞೆಯನ್ನು ಕೈಗೊಂಡಿರುವ ಬೆನ್ನಿಗೇ ನಡೆಯುತ್ತಿರುವ ಮೂರನೆ ಸುತ್ತಿನ ಮಾತುಕತೆಯಲ್ಲಿ ರೈತ ನಾಯಕರೊಂದಿಗೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಅರ್ಜುನ್ ಮುಂಡಾ ಹಾಗೂ ನಿತ್ಯಾನಂದ ರಾಯ್ ವಿಡಿಯೊ ಸಂವಾದದ ಮೂಲಕ ಪಾಲ್ಗೊಳ್ಳಲಿದ್ದಾರೆ.

ಇದಕ್ಕೂ ಮುನ್ನ, ಹಿರಿಯ ಸಚಿವರಾದ ರಾಜನಾಥ್ ಸಿಂಗ್ ಹಾಗೂ ಅರ್ಜುನ್ ಮುಂಡಾ ಬುಧವಾರ ರೈತರ ಪ್ರತಿಭಟನೆ ಹಾಗೂ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News