ಯಾವುದೇ ತೀರ್ಮಾನಕ್ಕೆ ಬರದ 3ನೇ ಸುತ್ತಿನ ಮಾತುಕತೆ: ಪಂಜಾಬ್, ಹರ್ಯಾಣ ಗಡಿ ಭಾಗಗಳಲ್ಲೇ ಉಳಿದುಕೊಳ್ಳಲಿರುವ ಪ್ರತಿಭಟನಾನಿರತ ರೈತರು
ಚಂಡೀಗಢ: ಗುರುವಾರ ಸಂಜೆ ಚಂಡೀಗಢದಲ್ಲಿ ಪ್ರತಿಭಟನಾನಿರತ ರೈತ ಸಂಘಟನೆಗಳು ಮತ್ತು ಕೇಂದ್ರದ ನಡುವಿನ ಮೂರನೇ ಸುತ್ತಿನ ಮಾತುಕತೆಗಳು ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರು ಪಂಜಾಬ್ ಮತ್ತು ಹರ್ಯಾಣಾದ ಎರಡು ಗಡಿಗಳಲ್ಲಿಯೇ ಉಳಿದುಕೊಳ್ಳಲಿದ್ದಾರೆ.
ಗುರುವಾರ ರಾತ್ರಿ 8.45ಕ್ಕೆ ಆರಂಭಗೊಂಡ ಮಾತುಕತೆಗಳು ಐದು ಗಂಟೆಗಳ ಕಾಲ ಮುಂದುವರಿದರೂ ಫಲಪ್ರವಾಗಿಲ್ಲ. ಎರಡೂ ಕಡೆಗಳು ನಾಲ್ಕನೇ ಸುತ್ತಿನ ಮಾತುಕತೆಗಳಿಗಾಗಿ ಫೆಬ್ರವರಿ 18ರಂದು ಮತ್ತೆ ಸಭೆ ಸೇರಲಿದ್ದಾರೆ.
ಗುರುವಾರದ ಮಾತುಕತೆಗಳ ವೇಳೆ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಮತ್ತು ಗೃಹ ವ್ಯವಹಾರಗಳ ಸಚಿವ ನಿತ್ಯಾನಂದ್ ರಾಯ್ ಕೇಂದ್ರವನ್ನು ಪ್ರತಿನಿಧಿಸಿದ್ದರು. ರೈತ ಸಂಘಟನೆಗಳ ಮುಖಂಡರ ಹೊರತಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ನ್ ಹಾಗೂ ವಿತ್ತ ಸಚಿವ ಹರ್ಪಾಲ್ ಸಿಂಗ್ ಚೀಮಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಸೌಹಾರ್ದಯುತ ವಾತಾವರಣದಲ್ಲಿ ಸಭೆ ನಡೆಯಿತು ಎಂದು ಕೃಷಿ ಸಚಿವ ಮುಂಡಾ ಹೇಳಿದ್ದಾರೆ. “ರವಿವಾರ ಸಂಜೆ 6ಗಂಟೆಗೆ ಮತ್ತೆಸಭೆ ನಡೆಯಲಿದೆ. ಜೊತೆಯಾಗಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಆಶಾವಾದವಿದೆ,” ಎಂದು ಅವರು ಹೇಳಿದ್ದಾರೆ.
ಎಂಎಸ್‌ಪಿ ಕುರಿತು ಕಾನೂನಾತ್ಮಕ ಗ್ಯಾರಂಟಿ, ಸಾಲ ಮನ್ನಾ ಸಹಿತ ವಿವಿಧ ಬೇಡಿಕೆಗಳ ಕುರಿತು ವಿವರವಾದ ಚರ್ಚೆ ನಡೆಯಿತು, ಅವರು (ಕೇಂದ್ರ ಸಚಿವರು) ಸಮಯಾವಕಾಶ ಕೇಳಿದ್ದಾರೆ,” ಎಂದು ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಹೇಳಿದ್ದಾರೆ.
“ಸಕಾರಾತ್ಮಕ ಫಲಿತಾಂಶ ದೊರೆಯಬೇಕು ಹಾಗೂ ಸಂಘರ್ಷ ತಪ್ಪಿಸಬೇಕೆಂಬುದು ನಮ್ಮ ಇಚ್ಛೆ. ಇಲ್ಲದೇ ಹೋದಲ್ಲಿ ದಿಲ್ಲಿಗೆ ತೆರಳುವ ನಮ್ಮ ಕಾರ್ಯಕ್ರಮ ಮುಂದುವರಿಯಲಿದೆ,” ಎಂದು ಅವರು ಹೇಳಿದರು.
ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ, ವಿವಿಧ ಮುಖಂಡರ ಸಾಮಾಜಿಕ ಜಾಲತಾಣ ಖಾತೆಗಳನ್ನು ಅಮಾನತುಗೊಳಸಿರುವ ಬಗ್ಗೆ ರೈತ ಮುಖಂಡರು ಸಭೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.